ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ಶಿರಡಿ ನಗರ ಹಾಸ್ಟೆಲ್‍ನಲ್ಲಿ ವಾಸವಿರುವ ಕುಮಾರ ಚವ್ಹಾಣ್ ಹಲ್ಲೆಗೀಡಾದ ಯುವಕ, ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಕುಮಾರ ಚವ್ಹಾಣ್, ಬಟ್ಟೆ ಖರೀದಿಸಿ ಹಾಸ್ಟೆಲ್‍ಗೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಈತನನ್ನು ನೋಡಿ ಮಹಿಳೆಯೊಬ್ಬಳು ಕೈಸನ್ನೆ ಮಾಡಿ ಕರೆದಿದ್ದಾಳೆ. ಬಳಿಕ ಆ ಮಹಿಳೆ ಈತನನ್ನು ಆಟೋದಲ್ಲಿ ಸುತ್ತಾಡಿಸಿ ಕೊನೆಗೆ ಬಂಜಾರ ಕಾಲನಿ ಕಡೆಗೆ ಕರೆದೊಯ್ದು. ಜೊತೆಗಿದ್ದ ಮೂವರು ಸಹಚರರು ಕುಮಾರನಿಗೆ ಹಲ್ಲೆ ಮಾಡಿ, 17 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ 5,000 ರೂಪಾಯಿ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ತನ್ನ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಕುಮಾರ ಆಟೋದಿಂದ ಜಿಗಿದು ತಪ್ಪಿಸಿಕೊಂಡು ಬಂದು, ಮುಜಮಿ, ವೆಂಕಟೇಶ್, ಗೀತಾ ಮತ್ತು ಶಬ್ಬಿರ್ ಹಲ್ಲೆ ನಡೆಸಿರುವ ಬಗ್ಗೆ ಗೋಕುಲ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.