ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) 34ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (MIvsKKR) ತಂಡಗಳು ಮುಖಾಮುಖಿ ಆಗುತ್ತಿವೆ. ಮುಂಬೈ ತಂಡ ಈ ಬಾರಿಯ ಟೂರ್ನಿಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇತ್ತ ಕೆಕೆಆರ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಜಯ ಸಾಧಿಸಿದ್ದು ಐದರಲ್ಲಿ ಸೋತು ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದ್ದು, ಅಬಿಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಐಪಿಎಲ್ 2021ರ ಎರಡನೇ ಚರಣದಲ್ಲಿ ನಡೆದ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸೋಲು ಕಂಡಿತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿರೋನ್ ಪೊಲಾರ್ಡ್ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಇವರು ಬ್ಯಾಟಿಂಗ್-ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಇಂದು ರೋಹಿತ್ ಕಮ್ಬ್ಯಾಕ್ ಮಾಡಲಿದ್ದಾರೆ.
ಕಳೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸೌರಭ್ ತಿವಾರಿ ಅಜೇಯ 50 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಯಾರು ಹೆಚ್ಚು ಮಿಂಚಲಿಲ್ಲ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ವಿಂಟನ್ ಡಿಕಾಕ್, ಕ್ರುನಾಲ್ ಪಾಂಡ್ಯರಂತಹ ಪ್ರಮುಖ ಆಟಗಾರರೇ ವೈಫಲ್ಯ ಅನುಭವಿಸಿದರು. ಹೀಗಾಗಿ ಇವರ ಮೇಲೆ ಸಾಕಷ್ಟು ಒತ್ತಡವಿದೆ. ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯಕ್ಕೆ ಫಿಟ್ ಆಗಿರುವ ಸಾಧ್ಯತೆಯಿದ್ದು, ಕಣಕ್ಕಿಳಿಯಬಹುದು.
ಇನ್ನೂ ಮುಂಬೈ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದರೂ ಯಾರೂ ಕ್ಲಿಕ್ ಆಗುತ್ತಿಲ್ಲ. ಜಸ್ಪ್ರೀತ್ ಬುಮ್ರಾ ಕೂಡ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಸ್ಪಿನ್ನರ್ಗಳ ಜಾದು ವರ್ಕ್ ಆಗುತ್ತಿಲ್ಲ. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ.
ಇತ್ತ ಆರ್‌ಸಿಬಿ ಎದುರು 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ್ದ ಕೆಕೆಆರ್, ಮುಂಬೈ ಎದುರು ಮೊದಲ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಲೀಗ್‌ನಲ್ಲಿ ಮುಂಬೈ ಎದುರು ಅತಿಹೆಚ್ಚು ಸೋಲನುಭವಿಸಿರುವ ತಂಡ ಎಂಬ ಅನಾಪೇಕ್ಷಿತ ದಾಖಲೆಗೆ ತುತ್ತಾಗಿರುವ ಕೆಕೆಆರ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡ 22 ಪಂದ್ಯಗಳಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.