Home / ಜಿಲ್ಲೆ / ಬೆಂಗಳೂರು / ಒಂದೇ ಸಮುದಾಯದ 70 ಮಂದಿಗೆ ಎಫ್​ಡಿಎ ಅರ್ಹತೆ?; ಕೆಪಿಎಸ್​ಸಿಯಲ್ಲಿ ಮತ್ತೆ ಅಕ್ರಮ ಶಂಕೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಿಗೆ ಜಾಕ್​ಪಾಟ್

ಒಂದೇ ಸಮುದಾಯದ 70 ಮಂದಿಗೆ ಎಫ್​ಡಿಎ ಅರ್ಹತೆ?; ಕೆಪಿಎಸ್​ಸಿಯಲ್ಲಿ ಮತ್ತೆ ಅಕ್ರಮ ಶಂಕೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಿಗೆ ಜಾಕ್​ಪಾಟ್

Spread the love

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸುದ್ದಿಯಲ್ಲಿದ್ದ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹುದ್ದೆಗಳ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ) ಬಿಡುಗಡೆ ಮಾಡಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೆಪಿಎಸ್​ಸಿ ಬಿಡುಗಡೆ ಮಾಡಿದ ಎಫ್​ಡಿಎ ಅರ್ಹತಾ ಪಟ್ಟಿಯಲ್ಲಿ 5241, 42, 43 ನೋಂದಣಿ ಸಂಖ್ಯೆಯಲ್ಲಿರುವ ಒಂದೇ ಸಮುದಾಯದ (ನಾಯ್್ಕ ಸುಮಾರು 70ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, ಬಹುತೇಕರು ಒಂದೇ ಕೊಠಡಿಯಲ್ಲಿ ಬರೆದಿದ್ದಾರೆಂಬ ಅನುಮಾನಗಳನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ಈಗಾಗಲೆ ಈ ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಪಿಎಸ್​ಸಿ ಬಗ್ಗೆ ಹಲವು ಅಭ್ಯರ್ಥಿಗಳು ಕೆಟ್ಟದಾಗಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಈ ರೀತಿ ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡುವುದಾದರೆ, ಪರೀಕ್ಷೆ ಏಕೆ ನಡೆಸಬೇಕಾಗಿತ್ತು ಎಂದು ಪ್ರಶ್ನಿಸಿದ್ದಾರೆ. 1112 ಹುದ್ದೆಗಳಿಗೆ ನಡೆಸಿದ ಆಯ್ಕೆ ಪರೀಕ್ಷೆ ಇದಾಗಿದ್ದು, ಅರ್ಹತಾ ಪಟ್ಟಿಯಲ್ಲಿ 3,852 ಅಭ್ಯರ್ಥಿಗಳ ಹೆಸರಿದೆ.

ಆಯೋಗ ಹೇಳುವುದೇನು?: ಯಾವುದೇ ಹುದ್ದೆ ಆಯ್ಕೆ ಪಟ್ಟಿ ಸಿದ್ಧಪಡಿಸುವ ಮುನ್ನ ಅರ್ಹತಾ ಪಟ್ಟಿ ಸಿದ್ಧಪಡಿಸುತ್ತೇವೆ. ಇಲ್ಲಿ ಒಂದು ಹುದ್ದೆ 1:3 ಅನುಪಾತದಲ್ಲಿ ಬಿಡುಗಡೆ ಮಾಡುತ್ತೇವೆ. ಆಕ್ಷೇಪಣೆಗಳು, ದಾಖಲೆಗಳು ಸರಿ ಇಲ್ಲದ್ದಲ್ಲಿ, ಅವುಗಳನ್ನು ಮತ್ತೆ ತಿರಸ್ಕರಿಸಲಾಗುತ್ತದೆ. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿರುತ್ತದೆ. ಇಲ್ಲಿ ಆಯೋಗದ ಹಸ್ತಕ್ಷೇಪ ಇರುವುದಿಲ್ಲ. ಅಲ್ಲದೆ, ಅಲ್ಲಿ ಅಭ್ಯರ್ಥಿಗಳ ಸಮುದಾಯ ಕೂಡ ನಮೂದಾಗಿರುವುದಿಲ್ಲ. ಆದರೆ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೆಪಿಎಸ್​ಸಿ ತಿಳಿಸಿದೆ.

ಇದೊಂದು ಅರ್ಹತಾ ಪಟ್ಟಿಯೇ ಹೊರತು, ಆಯ್ಕೆ ಪಟ್ಟಿಯಲ್ಲ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಒಂದೇ ಸಮುದಾಯದವರು ಆಯ್ಕೆ ಆಗಿರುವ ಬಗ್ಗೆ ಪರಿಶೀಲಿಸಲಾಗುವುದು.

| ಎಂ.ಕನಗವಲ್ಲಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ

ಪ್ರಶ್ನೆಪತ್ರಿಕೆ ಸೋರಿಕೆ: ಎಫ್​ಡಿಎ ಪರೀಕ್ಷೆಯನ್ನು 2021 ಜ.24ರಂದು ಸಾಮಾನ್ಯ ಹಾಗೂ ಜ.23ರಂದು ಕನ್ನಡ ಭಾಷಾ ಪರೀಕ್ಷೆ (ಕನ್ನಡ ವ್ಯಾಸಂಗ ಮಾಡದವರಿಗಾಗಿ) ನಡೆಸಿತ್ತು. ಅದೇ ದಿನ ಸಂಜೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಸೋರಿಕೆಯಾದ ಪತ್ರಿಕೆ ಜ.24ರಂದು ಆಯೋಜಿಸಿದ್ದ ಪರೀಕ್ಷೆಯ ಪತ್ರಿಕೆಯೇ ಆಗಿದ್ದರಿಂದ ತಕ್ಷಣ ಎಚ್ಚೆತ್ತ ಆಯೋಗ ಪರೀಕ್ಷೆಯನ್ನು ಮುಂದೂಡಿತ್ತು. ಫೆಬ್ರವರಿಯಲ್ಲಿ ಮತ್ತೆ ಪರೀಕ್ಷೆ ನಡೆಸಿತ್ತು. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೆಪಿಎಸ್​ಸಿ ಪರೀಕ್ಷಾ ವಿಭಾಗದ ಶ್ರೀಘ್ರಲಿಪಿಗಾರ್ತಿ ಸನಾ ಬೇಡಿ ಸೇರಿ 18 ಮಂದಿ ಆರೋಪಿಗಳನ್ನು ಸಿಸಿಬಿ ವಿಚಾರಣೆ ನಡೆಸಿದಾಗ ಅಕ್ರಮ ಮತ್ತಷ್ಟು ಬಯಲಾಗಿತ್ತು. ಆಯೋಗದವರೇ ನೇರವಾಗಿ ಭಾಗಿಯಾಗಿದ್ದರಿಂದ, ಇದೀಗ ಪಟ್ಟಿಯಲ್ಲಿ ಒಂದೇ ಕೇಂದ್ರದವರು ಹೆಚ್ಚಾಗಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಕೆಪಿಎಸ್​ಸಿ ಮೇಲೆ ಪರೀಕ್ಷಾರ್ಥಿಗಳು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ