ಬಳ್ಳಾರಿ: ತಂದೆ ಕಾಣೆಯಾಗಿದ್ದಾರೆ ಎಂದು ಹುಡುಕುವ ಸಲುವಾಗಿ ಮನೆಯಿಂದ ಹೋಗಿದ್ದ ಮಗ, ವಾಪಸ್ ಹೆಣವಾಗಿ ಮರಳುವಂತೆ ಆಗಿದೆ. ಜೊತೆಗಿದ್ದ ಪತ್ನಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರೂ ಆಕೆಯ ಬಾಳೀಗ ಗೋಳು ಎಂಬಂತಾಗಿದೆ.
ಬಳ್ಳಾರಿಯ 35ನೇ ವಾರ್ಡ್ ನಿವಾಸಿ ತಿಪ್ಪೇಸ್ವಾಮಿ ( 40) ಮೃತ ಪಟ್ಟ ದುರ್ದೈವಿ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಬಳಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈತ ಮೃತ ಪಟ್ಟಿದ್ದಾನೆ.
ತಂದೆ ದೊರೆಸ್ವಾಮಿ ಏಕಾಏಕಿ ಮನೆಯಿಂದ ಕಾಣೆಯಾಗಿದ್ದರಿಂದ ವಿಚಲಿತಗೊಂಡಿದ್ದ ಪುತ್ರ, ತಂದೆಯನ್ನು ಹುಡುಕಲೆಂದು ಪತ್ನಿಯೊಂದಿಗೆ ಕೊಳಗಲ್ ಗ್ರಾಮಕ್ಕೆ ತೆರಳಿದ್ದ. ಕಾಣೆಯಾದವರು ಎಲ್ಲಿದ್ದಾರೆ ಎಂಬ ಜಾಡನ್ನು ಹೇಳುವ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಮರಳಿ ಬಳ್ಳಾರಿಗೆ ಬರುವಾಗ ಅಪಘಾತ ಸಂಭವಿಸಿದೆ.
ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಡ ಚಕ್ರದಡಿಗೆ ಸಿಲುಕಿ ಮೃತಪಟ್ಟರೆ, ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಪತ್ನಿ ಚಂದ್ರೇಶ್ವರಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇವರಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ಕುರುಗೋಡು ತಾಲೂಕಿನ ಹಳ್ಳಿಯೊಂದರಲ್ಲಿ ಮಗನನ್ನು ಉಳಿಸಲು ಹೋಗಿ ತಂದೆ ದಾರುಣವಾಗಿ ಮೃತಪಟ್ಟ ಘಟನೆ ನಡೆದಿತ್ತು.
Laxmi News 24×7