ಬೆಂಗಳೂರು: ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಕಾರಾಗೃಹ ಕಚೇರಿಗೆ ಇಂದು ಭೇಟಿ ನೀಡಿ ಕಾರಾಗೃಹ ಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರಾಗೃಹಗಳಲ್ಲಿ ಅನಧಿಕೃತವಾಗಿ ಹಾಗೂ ಕಾನೂನುಬಾಹಿರವಾಗಿ ಕೈದಿಗಳು ಮಾದಕ ವಸ್ತುಗಳ ನ್ನು ಪಡೆದುಕೊಳ್ಳುತ್ತಿರುವ ಹಾಗೂ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ಫೋನ್ ಸೌಲಭ್ಯ ಮೂಲಕ ಸಂಪರ್ಕ ಸಾಧಿಸಿ ಹಣ ಸುಲಿಗೆ ನಡೆಸುತ್ತಿರುವ ಘಟನೆಗಳನ್ನು ಉದಾಹರಿಸಿ, ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ನಡೆಸುವುದು ಕಂಡು ಬಂದರೆ ಇಬ್ಬರ ಮೇಲೂ ಕಠಿಣ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ ಕೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಾಗುವುದರಿಂದ ಸಣ್ಣ ಹಾಗೂ ತಾಲೂಕು ಮಟ್ಟದ ಕಾರಾಗೃಹ ಗಳನ್ನೂ ಜಿಲ್ಲಾ ಕಾರಾಗೃಹ ಗಳ ಜೊತೆಗೆ ಸಂಲಾಗ್ನ ಹೋಲಿಸಲು ಸಚಿವರು ಸಲಹೆ ನೀಡಿದರು. ಜಿಲ್ಲಾ ಕಾರಾಗೃಹ ಗಳ ಸಾಮರ್ಥ್ಯ ವನ್ನು ಹೆಚ್ಚಿಸಿ ಸಣ್ಣ ಜೈಲುಗಳನ್ನು ಮುಚ್ಚಬೇಕು ಎಂದು ಹೇಳಿದರು.
ಕಾರಾಗೃಹಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವೈಖರಿಯನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ, ಇದರಿಂದ ಕೈದಿಗಳ ದೃಷ್ಟಿಯಲ್ಲಿ ಚಿಕ್ಕವರಾಗಬೇಡಿ. ಜೈಲಿನಿಂದ ಹೊರ ಬರುವಾಗ ಕೈದಿ ಪರಿವರ್ತನೆಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗೇಕು ಎಂದರು.