ಬೆಂಗಳೂರು : ಕೋವಿಡ್-೧೯ ಕಾರಣದಿಂದಾಗಿ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಶಾಲೆಗಳು ಮತ್ತೆ ಪುನಾರಂಭಗೊಂಡಿದ್ದು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಹಳ ಆಸಕ್ತಿಯಿಂದ ಶಾಲೆಗೆ ಮರಳುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.೫೨ ರಷ್ಟು ಮಕ್ಕಳು ಹಾಜರಾಗಿದ್ದು, ಶಾಲಾ ಆರಂಭದಲ್ಲಿಯೇ ಉತ್ತಮ ಹಾಜರಾತಿ ಕಂಡು ಸಂತಸವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.
ಕೋವಿಡ್-೧೯ ಸೋಂಕಿನ ಇಳಿಕೆ ಹಿನ್ನೆಲೆ, ಶಾಲಾ ಕಾಲೇಜುಗಳು ಪುನರಾರಂಭವಾಗಿದ್ದರಿಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಇಂಟರ್‌ನೆಟ್ ಸೌಲಭ್ಯ, ಸ್ಮಾರ್ಟ್‌ಫೋನ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳ ಆನ್‌ಲೈನ್ ತರಗತಿಗಳು ತಲುಪದ ಕಾರಣ, ವಿಶೇಷವಾಗಿ ಸರ್ಕಾರಿ ಶಾಲೆಗಳು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಳಕಳಿ ಹೊಂದಿದ್ದು, ಭೌತಿಕ ತರಗತಿಗಳನ್ನು ನಡೆಸುವ ಮೂಲಕ ಅವರಿಗೂ ಪಾಠಗಳನ್ನು ಕಲಿಸಲು ಸಾಧ್ಯವಾಗಲಿದೆ ಎಂದರು.
Laxmi News 24×7