ಬೆಳಗಾವಿ – ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ, ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24 X 7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಮೂರು ವರ್ಷದ ಹಿಂದೆ ಈ ಯೋಜನೆ ರದ್ದಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಅಭಯ ಪಾಟೀಲ ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ನೆರವಿನಿಂದ, ಆಗಿನ ಕೇಂದ್ರದ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರ ಸಹಾಯದಿಂದ ಕೇಂದ್ರದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ನಂತರ ರಾಜ್ಯದಲ್ಲಿ ಹಲವು ಬಾರಿ ಸಭೆಗಳನ್ನು ನಡೆಸಿ 804 ಕೋಟಿ ರೂ ವೆಚ್ಚದ ಕಾಮಗಾರಿಗೆ ಮಂಜೂರಾತಿ ಪಡೆದು, ಟೆಂಡರ್ ಕರೆದು ಈ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಬೆಳಗಾವಿ ನಗರದ 1.2 ಲಕ್ಷ ಮನೆಗಳಿಗೆ ನಿರಂತರವಾಗಿ ನೀರು ಪೂರೈಸುವ ಮಹತ್ವದ ಯೋಜನೆ ಇದಾಗಿದೆ. 61.22 ಕಿಮೀ ಹೊಸ ಪೈಪಲೈನ್, ಒಟ್ಟು 1162 ಕಿ.ಮೀ ಅಂತರದ ಪೈಪಲೈನ್, ಎರಡನೇಯ ಅಂತಸ್ತಿನ ಮನೆಗಳಿಗೂ ನಿರಂತರವಾಗಿ ನೀರು ಪೂರೈಸುವ ಯೋಜನೆ ಇದಾಗಿದೆ.
ದೇಶದ ಪ್ರಖ್ಯಾತ ಕಂಪನಿ ಲ್ಯಾರ್ಸನ್ ಆ್ಯಂಡ್ ಟುರ್ಬೋ ಕಂಪನಿಯವರು ಈ ಯೋಜನೆಯ ಗುತ್ತಿಗೆ ಪಡೆದು ಈಗಾಗಲೇ ಕಾಮಗಾರಿ ಶುರು ಮಾಡಿದ್ದಾರೆ.
Laxmi News 24×7