ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು, ಸುಟ್ಟು ಹಾಕಿದ ಘಟನೆ ಬುಧವರಾ ತಡರಾತ್ರಿ ನಡೆದಿದೆ.
ತಡರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಸುಟ್ಟು ಹೋಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ಗಳನ್ನ ತಂದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಶಾಸಕ ಸತೀಶ್ ರೆಡ್ಡಿ, ‘1:23ಕ್ಕೆ ದುಷ್ಕರ್ಮಿಗಳು ಬಂದಿದ್ದು, ಆ ಕಡೆ ಈ ಕಡೆ ನೋಡಿ ಎರಡು ಗಾಡಿಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಾರೆ. 1:30ಕ್ಕೆ ನಮಗೆ ಘಟನೆ ಬಗ್ಗೆ ಗೊತ್ತಾಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಶಬ್ದ ಬಂದು ನಮಗೆ ಎಚ್ಚರವಾಯಿತು. ಗೇಟ್ ಬಳಿ ಇದ್ದ ಪೊಲೀಸರು ಹಾಗೂ ನಮ್ಮ ವಾಚ್ಮ್ಯಾನ್ ಓಡಿ ಬಂದರು. ಅರ್ಧಗಂಟೆ ಕಾಲ ಬೆಂಕಿಯನ್ನ ಆರಿಸುವ ಕೆಲಸ ನಡೆಯಿತು’ ಎಂದಿದ್ದಾರೆ.
ದುಷ್ಕರ್ಮಿಗಳು ಶಾಸಕರ ಮನೆಯ ಹಿಂಬದಿಯ ಗೇಟಿಂದ ಒಳಗೆ ನುಗ್ಗಿದ್ದಾರೆಂದು ಆಗ್ನೇಯ ವಿಭಾಗ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಸ್ಪಷ್ಟನೆ ನೀಡಿದ್ದಾರೆ. ವಿಶೇಷ ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.
Laxmi News 24×7