ಬೆಂಗಳೂರು: ಬಹು ನಿರೀಕ್ಷಿತ 2021ರ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಕುರಿತು ಈಗಾಗಲೇ ಬಹುತೇಕ ಒಂದು ನಿರ್ಧಾರ ತಳೆಯಲಾಗಿದೆ. ಫಲಿತಾಂಶವನ್ನು ಆಗಸ್ಟ್ 10ರೊಳಗೆ ಪ್ರಕಟಿಸುವುದಾಗಿ ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಹೇಳಿದ್ದರು. ಆದರೆ, ಇದೀಗ ಸಚಿವ ಸಂಪುಟ ಬದಲಾಗಿದ್ದು, ಸಚಿವರ ನೇಮಕವಾಗಬೇಕಿದೆ.
ಈ ಮಧ್ಯೆ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಗುರುವಾರ ಮಂಡಳಿ ಸದಸ್ಯರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಸಭೆಯ ನಡಾವಳಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದು, ಅವರಿಂದ ಅನುಮತಿಗಾಗಿ ಮಂಡಳಿಯು ಕಾಯುತ್ತಿದ್ದು, ಬಹುಶಃ ಒಂದೆರಡು ದಿನಗಳಲ್ಲಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಲಿದೆ.
ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಕೇವಲ ಎರಡು ದಿನಗಳಲ್ಲೇ ಮುಗಿಸಲಾಗಿತ್ತು. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪಾಸ್ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಪಡೆಯಲಿದ್ದಾರೆ.
Laxmi News 24×7