ಬಾಗಲಕೋಟೆ: ಜಿಲ್ಲೆಯ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಬಾಗಲಕೋಟೆ ಕೆ ಎಸ್ ಆರ್ ಟಿ ಸಿ ವತಿಯಿಂದ ವಿಶೇಷ ಪ್ರವಾಸಿ ಬಸ್ಗಳ ಸೇವೆ ಆರಂಭಿಸಲಾಗಿದೆ. ಕೇವಲ 240 ರೂಪಾಯಿಯಲ್ಲಿ 10ಕ್ಕೂ ಅಧಿಕ ಐತಿಹಾಸಿಕ ಪ್ರವಾಸಿ ತಾಣಗಳ ದರ್ಶನವನ್ನು ಚಾಲುಕ್ಯ ದರ್ಶನ ವಿಶೇಷ ಬಸ್ ಮೂಲಕ ಮಾಡಬಹುದಾಗಿದೆ.
ಬಾಗಲಕೋಟೆಯ ಐತಿಹಾಸಿಕ ಪ್ರವಾಸಿ ತಾಣಗಳ ಭೇಟಿಗೆ ಚಾಲುಕ್ಯ ದರ್ಶನ
ಬಾಗಲಕೋಟೆ ಜಿಲ್ಲೆ ಹೆಚ್ಚು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ ಪ್ರಮುಖ ಜಿಲ್ಲೆ. ಶಕ್ತಿದೇವತೆ ಬನಶಂಕರಿದೇವಿ ದೇವಸ್ಥಾನ, ಬದಾಮಿ ಚಾಲುಕ್ಯರ ಕಾಲದ ದೇಗುಲಗಳು, ಬದಾಮಿ ಗುಹೆಗಳು, ಮಹಾಕೂಟ, ಪಟ್ಟದಕಲ್ಲು ಹೀಗೆ ಸಾಲು ಸಾಲು ಪ್ರವಾಸಿ ತಾಣಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ಇವುಗಳ ವೀಕ್ಷಣೆಗೆ ಹೋಗಬೇಕಂದ್ರೆ ಈ ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡ್ಬೇಕಿತ್ತು. ಆದ್ರೆ ಈಗ ಬಾಗಲಕೋಟೆಯಲ್ಲಿ ಕೆಎಸ್ಆರ್ಟಿಸಿ ಪ್ರವಾಸಿ ಬಸ್ ಸೇವೆ ಆರಂಭಿಸಲಾಗಿದೆ. ಹೀಗಾಗಿ ಇನ್ಮುಂದೆ ಕೇವಲ 240 ರೂಪಾಯಿಯಲ್ಲಿ ಎಲ್ಲಾ ಪ್ರವಾಸಿ ತಾಣಗಳ ನೋಡಬಹುದಾಗಿದೆ.
![](https://assets-news-bcdn.dailyhunt.in/cmd/resize/400x400_80/fetchdata16/images/5d/2a/0d/5d2a0de9344b1806a4e12536669e314fce47c4eede6e6f13687e7d44259fd019.jpg)
ಪ್ರವಾಸಿ ತಾಣಗಳ ದರ್ಶನಕ್ಕೆ ಕೇವಲ 240 ರೂಪಾಯಿ ಟಿಕೆಟ್
ಪ್ರತಿ ಪ್ರವಾಸಿ ತಾಣದಲ್ಲೂ ಅರ್ಧ ಗಂಟೆ ವೀಕ್ಷಣೆಗೆ ಅವಕಾಶ
ಬಾಗಲಕೋಟೆಯ ನವನಗರ ಬಸ್ ನಿಲ್ದಾಣದಿಂದ ಪ್ರತಿ ದಿನ ಬೆಳಿಗ್ಗೆ 8:30ಕ್ಕೆ ಈ ವಿಶೇಷ ಪ್ರವಾಸಿ ಬಸ್ ಹೊರಡಲಿದೆ. ಅಲ್ಲಿಂದ ಹಳೆ ಬಸ್ ನಿಲ್ದಾಣ ನಂತರ ಬದಾಮಿ, ಬನಶಂಕರಿ ದೇವಸ್ಥಾನ, ಶಿವಯೋಗಮಂದಿರ, ಮಹಾಕೂಟ ಪಟ್ಟದಕಲ್ಲು, ಐಹೊಳೆ ಹೀಗೆ ಸಂಚರಿಸಿ ಚಾಲುಕ್ಯ ಕಾಲದ ದೇಗುಲಗಳ ಶಿಲ್ಪಕಲಾ ವೈಭವದ ದರ್ಶನ ಮಾಡಿಸಲಿದೆ. ನಂತರ ನೇರವಾಗಿ ಕೂಡಲಸಂಗಮ ಬಸವಣ್ಣನ ಐಕ್ಯಮಂಟಪ, ಸಂಗಮನಾಥ ದೇವಾಲಯ, ತ್ರಿವೇಣಿ ಸಂಗಮ, ಬಸವಧರ್ಮ ಪೀಠಕ್ಕೆ ತೆರಳಲಿದೆ. ಅಲ್ಲಿಂದ ಸಂಜೆ ಆಲಮಟ್ಟಿ ಜಲಾಶಯ ತಲುಪಿ ವಾಪಸ್ ಬಾಗಲಕೋಟೆ ಬರಲಿದೆ. ಪ್ರತಿ ಪ್ರವಾಸಿ ತಾಣದಲ್ಲೂ ಅರ್ಧ ಗಂಟೆ ಸಮಯ ವೀಕ್ಷಣೆಗೆ ಅವಕಾಶವಿದೆ. ಬಸ್ ನಲ್ಲಿ ಒಬ್ಬರಿಗೆ 240 ರೂ ಟಿಕೆಟ್ ಇದ್ದು, ಮನೆಮಂದಿ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಬಹುದಾಗಿದೆ.
![](https://assets-news-bcdn.dailyhunt.in/cmd/resize/400x400_80/fetchdata16/images/db/83/11/db8311bbd9fe2cf7aad4c7af85f236ea62171e6da802857dc8f980d09146f7c1.jpg)
ಒಟ್ಟಿನಲ್ಲಿ ಪ್ರವಾಸಿಗರಿಗೆ ಕೆ ಎಸ್ ಆರ್ ಟಿ ಸಿ ಕಡಿಮೆ ದರದಲ್ಲಿ ಟೂರ್ ಭಾಗ್ಯ ನೀಡಿದೆ. ಪ್ರವಾಸಿಗರಿಗೆ ಕಡಿಮೆ ಹಣದಲ್ಲಿ ಪ್ರವಾಸಿ ತಾಣಗಳ ದರ್ಶನ ಭಾಗ್ಯ ಸಿಕ್ಕಿರೋದ್ರಿಂದ ಪ್ರವಾಸಿಗರು ಫುಲ್ ಖುಶ್ ಆಗಿದ್ದಾರೆ. ನೀವು ಕೂಡ ಬಾಗಲಕೋಟೆ ಕಡೆ ಹೋದ್ರೆ ಈ ಚಾಲುಕ್ಯ ದರ್ಶನವನ್ನ ಮಾಡಬಹುದು.