Breaking News

ಪೆಗಾಸಸ್ ಬಳಕೆಗೆ ಪರವಾನಗಿ ಪಡೆದುಕೊಂಡಿದೆಯಾ ಕೇಂದ್ರ ಸರ್ಕಾರ!?

Spread the love

ನವದೆಹಲಿ, ಆಗಸ್ಟ್ 01: ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಬಳಸಿ ಬೇಹುಗಾರಿಕೆ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳು ಗುರುವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿವೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ. ಹಿರಿಯ ಪತ್ರಕರ್ತ ಎನ್ ರಾಮ್, ಶಶಿಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿತ್ತಾಸ್ ಹಾಗೂ ವಕೀಲ ಎಂಎಲ್ ಶರ್ಮಾ ಈ ಬಗ್ಗೆ ಸುಪ್ರೀಕೋರ್ಟ್ ಅರ್ಜಿ ಸಲ್ಲಿಸಿದ್ದರು.

 

ದೇಶದಲ್ಲಿ ಯಾವುದೇ ರೀತಿಯ ಬೇಹುಗಾರಿಕೆ ನಡೆಸುವ ಸಲುವಾಗಿ ಈ ತಂತ್ರಾಂಶವನ್ನು ಬಳಸುವುದಕ್ಕೆ ಪರವಾನಗಿ ಪಡೆದುಕೊಳ್ಳಲಾಗಿದೆಯೇ ಇಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಇಸ್ರೇಲ್ ತಂತ್ರಾಂಶದ ದುರ್ಬಳಕೆ ಬಗ್ಗೆ ಜಾಗತಿಕ ತನಿಖಾ ವರದಿ

ಜಾಗತಿಕ ತನಿಖಾ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ದೇಶದ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.

ಸಂಸತ್ ಕಲಾಪದಲ್ಲಿ ಪೆಗಾಸಸ್ ಗದ್ದಲ

 

ಕಳೆದ ಜುಲೈ 19ರಿಂದ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಬರೀ ಗದ್ದಲ-ಗಲಾಟೆಯೇ ಆಗುತ್ತಿದೆ. ಪೆಗಾಸಸ್ ಬೇಹುಗಾರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ಅಥವಾ ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ಸ್ವತಂತ್ರ್ಯ ತನಿಖಾ ತಂಡವನ್ನು ರಚಿಸುವಂತೆ ವಿಪಕ್ಷಗಳು ಪಟ್ಟು ಹಿಡಿದಿವೆ. ಸಂಸದರ ಪ್ರತಿಭಟನೆಯಿಂದಾಗಿ ಉಭಯ ಕಲಾಪಗಳಲ್ಲಿ ಯಾವುದೇ ರೀತಿಯ ಆರೋಗ್ಯಕರ ಚರ್ಚೆ ನಡೆದಿಲ್ಲ. ಈ ಮಧ್ಯೆ ಕೆಲವು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಇನ್ನೊಂದು ಕಡೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನಾ ವೈಖರಿ ಹಾಗೆಯೇ ಮುಂದುವರಿದಿದೆ. ಸಂಸತ್ತಿನಲ್ಲಿ ಗದ್ದಲ ಗಲಾಟೆಯಿಂದಾಗಿ ದೇಶದ 133 ಕೋಟಿ ತೆರಿಗೆದಾರರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪೆಗಾಗಸ್ ತನಿಖೆ ವಿಷಯದಲ್ಲಿ ಕೇಂದ್ರದಲ್ಲಿ ವಿಪಕ್ಷಗಳ ಒಗ್ಗಟ್ಟು

ನವದೆಹಲಿಯಲ್ಲಿ 14 ವಿರೋಧ ಪಕ್ಷಗಳ ನಾಯಕರು ಇದೇ ಪೆಗಾಸಸ್ ಬಗ್ಗೆ ಚರ್ಚಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಅಣಿಯಾಗಿವೆ. ಈ ಸಂಬಂಧ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಶಿವಸೇನೆ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ(ಸಿಪಿಐ), ಸಿಪಿಐ(ಎಂ), ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್(ಎಂ) ಮತ್ತು ವಿಸಿಕೆ ಪಕ್ಷದ ನಾಯಕರು ಸಭೆ ನಡೆಸಿದ್ದು ಪರವಾನಗಿ ಪಡೆಯದ ಇಸ್ರೇಲ್ ಬೇಹುಗಾರಿಕೆ ತಂತ್ರಾಂಶಕ್ಕೆ ನಿರ್ಬಂಧ ವಿಧಿಸುವಂತೆ ಆಗ್ರಹಿಸುತ್ತಿದ್ದಾರೆ.

ವಿರೋಧ ಪಕ್ಷಗಳ ಆರೋಪ ತಳ್ಳಿ ಹಾಕಿದ ಕೇಂದ್ರ

ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವರದಿಯು ಆಧಾರ ರಹಿತ ಆರೋಪವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. “ಈ ಬೇಹುಗಾರಿಕೆ ಆರೋಪದ ಹಿಂದೆ ಎಲ್ಲ ಪ್ರತಿಪಕ್ಷಗಳ ಕೈವಾಡವಿದೆ. ಪೆಗಾಸಸ್ ಮೂಲಕ ಗೂಢಾಚಾರಿಕೆ ನಡೆಸಿರುವ ಬಗ್ಗೆ ಯಾವುದೇ ಆಧಾರಗಳಿಲ್ಲದೇ ಆರೋಪಿಸಲಾಗುತ್ತಿದೆ,” ಎಂದು ಹೇಳಿದ್ದರು. ಅಲ್ಲದೇ, “ಪೆಗಾಸಸ್ ತಂತ್ರಾಂಶದ ಬಗ್ಗೆ ನಾವು ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿದಾಗ ಇದರ ಹಿಂದೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಸಂಸ್ಥೆಗಳ ಕಣ್ಗಾವಲಿನಲ್ಲಿ ಇರುವ ಕಾನೂನು ಮತ್ತು ದೃಢವಾದ ಅಂಕಿ-ಅಂಶಗಳಲ್ಲಿ ಯಾವುದೇ ರೀತಿ ಅಕ್ರಮ ಪ್ರವೇಶಕ್ಕೆ ಅವಕಾಶವೇ ಇಲ್ಲ. ಭಾರತದಲ್ಲಿ ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಎಲೆಕ್ಟ್ರಾನಿಕ್ ಸಂವಹನದ ಕಾನೂನುಬದ್ಧ ಪ್ರತಿಬಂಧನದ ಒಂದು ಸುಸ್ಥಾಪಿತ ಕಾರ್ಯವಿಧಾನವಿದೆ,” ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು.

“ಲೋಕಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಜಾಣ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಅವರು ಬೇಹುಗಾರಿಕೆ ನಡೆದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅನಧಿಕೃತವಾಗಿ ಬೇಹುಗಾರಿಕೆ ನಡೆದಿಲ್ಲ ಎಂದು ಹೇಳಿದ್ದಾರೆ. ಅಂದರೆ ಅಧಿಕೃತವಾಗಿ ಬೇಹುಗಾರಿಕೆ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಅನಧಿಕೃತ ಬೇಹುಗಾರಿಕೆ ಮತ್ತು ಅಧಿಕೃತ ಬೇಹುಗಾರಿಕೆ ನಡುವಿನ ವ್ಯತ್ಯಾಸದ ಬಗ್ಗೆ ಗೊತ್ತಿದೆ,” ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ. “ಪೆಗಾಸಸ್ ಬೇಹುಗಾರಿಕೆಯನ್ನು ಬಳಸಿದ್ದರೆ, ಅದನ್ನು ಯಾರು ಸ್ವಾಧೀನಪಡಿಸಿಕೊಂಡರು?, ಅದನ್ನು ಸರ್ಕಾರ ಅಥವಾ ಅದರ ಒಂದು ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆಯೇ. ಇವರು ಸಾರ್ವಜನಿಕರು ಕೇಳುತ್ತಿರುವ ಸರಳ ಮತ್ತು ನೇರ ಪ್ರಶ್ನೆಗಳಾಗಿವೆ. ಈ ಪ್ರಶ್ನೆಗೆ ಕೇಂದ್ರ ಸಚಿವರು ನೇರವಾಗಿ ಉತ್ತರ ನೀಡಬೇಕಿದೆ” ಎಂದು ಸರ್ಕಾರಕ್ಕೆ ಪಿ ಚಿದಂಬರಂ ಆಗ್ರಹಿಸಿದ್ದಾರೆ.

ಪೆಗಾಸಸ್ ಬಗ್ಗೆ ಜಾಗತಿಕ ಮಾಧ್ಯಮಗಳ ವರದಿ

ಜಾಗತಿಕ ಸುದ್ದಿ ಸಂಸ್ಥೆಗಳಾಗಿರುವ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೇ ಮೊಂಡೆ ಜೊತೆ ಸಹಯೋಗ ಹೊಂದಿರುವ ‘ದಿ ವೈರ್’ ಪೆಗಾಸಸ್ ಬೇಹುಗಾರಿಕೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಮಾಧ್ಯಮ ಪಾಲುದಾರ ಸಂಸ್ಥೆ ಆಗಿರುವ ಪ್ಯಾರಿಸ್ ಮೂಲದ ‘ನಾನ್ ಪ್ರಾಫಿಟ್ ಆರ್ಗನೈಸೇಷನ್ ಫಾರ್ಬಿಡನ್ ಸ್ಟೋರೀಸ್ ಮತ್ತು ರೈಟ್ಸ್ ಗ್ರೂಪ್ ಅಮ್ನೆಸ್ಟಿ ಇಂಟರ್ ನ್ಯಾಷನಲ್’ ಸಂಸ್ಥೆಗಳು ಈ ಕುರಿತು ತನಿಖೆ ನಡೆಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಿವೆ. ಇಸ್ರೇಲ್ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ