ಚಾಮರಾಜನಗರ : ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದು ಸಚಿವರಾಗಿದ್ದ 17 ಮಂದಿ ಶಾಸಕರಿಗೆ ಬಿಎಸ್ ವೈ ಶಾಕ್ ನೀಡಿದ್ದಾರೆ. ಅವರಿಗೆ ಮತ್ತೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ – ಜೆಡಿಎಸ್ ನಲ್ಲಿದ್ದ ಶಾಸಕರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಿದ್ದ ಬಿಎಸ್ ವೈ ಕೊಟ್ಟ ಮಾತಿನಂತೆ ಅವರಿಗೆ ಸಚಿವ ಸ್ಥಾನ ನೀಡಿದ್ದರು. ವಲಸೆ ಶಾಸಕರು ಕೂಡ ಯಡಿಯೂರಪ್ಪ ನವರ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರಿದ್ದಾಗಿ ಹೇಳಿದ್ದರು. ಕೆಲ ತಿಂಗಳ ಹಿಂದೆ ಬಿಎಸ್ ವೈ ರಾಜೀನಾಮೆಗೆ ಸಿದ್ಧ ಎಂದಾಗ ಆಗ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಆಘಾತ ವ್ಯಕ್ತಪಡಿಸಿ, ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇವೆ. ಅವರೇ ಈ ರೀತಿ ಹೇಳಿದ್ರೆ ಏನು ಮಾಡೋದು ಎಂದು ಅಸಹಾಯಕತೆ ತೋಡಿಕೊಂಡಿದ್ದರು.
ಅಲ್ಲದೆ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿದರೇ ನಮ್ಮ ಪರಿಸ್ಥಿತಿ ಏನು ಎಂಬ ಆತಂಕವೂ ವಲಸಿಗರಲ್ಲಿ ಮನೆ ಮಾಡಿತ್ತು. ಇದೀಗ ಸಿಎಂ ಬದಲಾಗಿದ್ದು, ಕೆಲ ವಲಸಿಗರನ್ನು ಸಚಿವ ಸ್ಥಾನ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಲಸಿಗರು ಮಂತ್ರಿಗಿರಿಗಾಗಿ ಲಾಬಿ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ವಲಸಿಗರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ಬಂದ 17 ಶಾಸಕರ ಬಗ್ಗೆ ನಾನು ಏನೂ ಹೇಳುವುದೂ ಇಲ್ಲ. ಅವರಿಗೆ ಸಚಿವ ಸ್ಥಾನ ಕೊಡುವುದು, ಬಿಡುವುದು ಸಿಎಂ ಬೊಮ್ಮಾಯಿಗೆ ಬಿಟ್ಟ ನಿರ್ಧಾರ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪನವರ ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಲಸಿಗರಿಗೆ ಮತ್ತೆ ಸಚಿವ ಸ್ಥಾನ ಸಿಗುತ್ತಾ..? ಮಂತ್ರಿ ಗಿರಿ ಸಿಗದೇ ಇದ್ದರೇ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ.
Laxmi News 24×7