ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿಯ ಪರಿಣಾಮ ಜನಸಾಮಾನ್ಯರ ಮೇಲೆ ಮಾತ್ರವಲ್ಲದೇ ಪ್ರಾಣಿಗಳ ಮೇಲೂ ಬೀರಿದೆ. ಪ್ರವಾಹದಲ್ಲಿ ಸಿಲುಕಿದ ವಾನರ ಸೈನ್ಯ ಆಹಾರಕ್ಕಾಗಿ ಮೊರೆಯಿಡುತ್ತಾ ಮರದಲ್ಲೇ ಕೂತು ಚೀರಾಡುತ್ತಿರುವ ಘಟನೆ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.
ಸುಮಾರು 20 ಕ್ಕೂ ಹೆಚ್ಚು ಮಂಗಗಳು ಪ್ರವಾಹದಲ್ಲಿ ಸಿಲುಕಿದ್ದು ಮಾವಿನ ಮರದಲ್ಲಿ ಕುಳಿತು ಆಹಾರವಿಲ್ಲದೇ ಪರದಾಡುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮರದಲ್ಲೇ ಕೂತು ಆಹಾರಕ್ಕಾಗಿ ಪರದಾಡುತ್ತಿರುವ ವಾನರ ಸೇನೆಯ ರೋದನೆಯನ್ನ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಬೇಗನೆ ರಕ್ಷಣೆ ಮಾಡುವಂತೆ ಕೋರಿದ್ದಾರೆ.
ಇನ್ನು ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ವಾನರ ಸೈನ್ಯವನ್ನು ರಕ್ಷಿಸಿಲು ಮುಂದಾಗಿದ್ದು ಬೋಟ್ ವ್ಯವಸ್ಥೆ ಮಾಡಿಕೊಂಡು ಆಹಾರ ಪೂರೈಕೆ ಮಾಡಲು ತಯಾರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.