Breaking News

ತಗ್ಗಿದ ಮಳೆಯ ಅಬ್ಬರ: ಜಲಾಶಯಗಳಲ್ಲಿ ಹೆಚ್ಚಿದ ನೀರು

Spread the love

ಬೆಂಗಳೂರು: ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸೋಮವಾರ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆರ್ಭಟಿಸಿದ್ದ ಮಳೆ ಸೋಮವಾರ ಸ್ವಲ್ಪ ಬಿಡುವು ನೀಡಿದೆ. ಶಿವಮೊಗ್ಗ ಸೇರಿ ಹಲವೆಡೆ ಬಿಸಿಲ ದರ್ಶನವಾದರೆ, ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರದ ಕೆಲವೆಡೆ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ.

ಮಳೆ ಕ್ಷೀಣಿಸಿದರೂ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಹೊಸನಗರ ತಾಲ್ಲೂಕಿನಲ್ಲಿ 17.1 ಸೆಂ.ಮೀ, ಹುಲಿಕಲ್‌ನಲ್ಲಿ 13.6 ಸೆಂ.ಮೀ, ಮಾಣಿಯಲ್ಲಿ 11.5 ಸೆಂ.ಮೀ. ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯ ಸೋಮವಾರ ಭರ್ತಿಯಾಗಿದ್ದು, ಜಲಧಾರೆಯ ಸುಂದರ ದೃಶ್ಯ ಜನಮನ ಸೆಳೆಯುತ್ತಿದೆ.

ಬಸವಾಪಟ್ಟಣ ಸಮೀಪದ ಚಿರಡೋಣಿ ಹತ್ತಿರ ಇರುವ ಸೂಳೆಕೆರೆ ಹಳ್ಳ ತುಂಬಿ ಹರಿಯುತ್ತಿದ್ದು, ಚಿರಡೋಣಿಯಿಂ ತ್ಯಾವಣಿಗೆಗೆ ಹೋಗುವ ರಸ್ತೆ ಸಂಚಾರ ಬಂದ್‌ ಆಗಿದೆ. ಹಳ್ಳವನ್ನು ದಾಟಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಕರಾವಳಿಯಲ್ಲಿ ಮಳೆ ಸ್ವಲ್ಪ ತಗ್ಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 3.4 ಸೆಂ.ಮೀ. ಮಳೆ ದಾಖಲಾಗಿದೆ. ಮೂರು ಮನೆಗಳು ಪೂರ್ಣ ಹಾಗೂ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಸಮೀಪದ ಹೊನ್ನಾಳ ಬಳಿ ಮರವೊಂದು ರಸ್ತೆಗೆ ಬಿದ್ದಿತ್ತು. ಶಂಕರಪುರದಲ್ಲಿ ಮನೆಗೆ ಹಾನಿಯಾಗಿದೆ. ನಗರ ಮತ್ತು ಗಿರಿ ಶ್ರೇಣಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ಮೈದುಂಬಿಕೊಂಡಿವೆ.

ಉಡುಪಿ ಹಾಗೂ ಕಾಪು ತಾಲ್ಲೂಕಿನಲ್ಲಿ ಜಲಾವೃತಗೊಂಡಿದ್ದ ಜನವಸತಿ ಪ್ರದೇಶಗಳಲ್ಲಿ ಸ್ವಲ್ಪ ನೆರೆ ತಗ್ಗಿದೆ. ಮಳೆಗೆ ಜಿಲ್ಲೆಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಭತ್ತದ ಗದ್ದಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಕರಿಕೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ‌

ಖಾನಾಪುರ, ಶಿರಸಿಯಲ್ಲಿ ಮಳೆ ಅಬ್ಬರ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸುತ್ತಮುತ್ತ ಸೋಮವಾರವೂ ಅಬ್ಬರದ ಮಳೆ ಮುಂದುವರಿದಿದೆ.

ಇನ್ನುಳಿದ ಭಾಗಗಳಲ್ಲಿ ಮಳೆ ಇಳಿಮುಖವಾಗಿದೆ.

ಖಾನಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಇಡೀ ದಿನ ಮೋಡಕವಿದ ವಾತಾವರಣ ಮುಂದುವರೆದಿದೆ. ಮಲಪ್ರಭಾ ನದಿಯ ಉಗಮಸ್ಥಳವಾಗಿರುವ ಕಣಕುಂಬಿ ಅರಣ್ಯದಲ್ಲಿ ಮಳೆ ಚುರುಕು ಪಡೆದಿದೆ.

ಕಣಕುಂಬಿ, ಜಾಂಬೋಟಿ, ಅಮಗಾಂವ ಮತ್ತು ಪಾರವಾಡ ಭಾಗದಲ್ಲಿ ಉತ್ತಮ ವರ್ಷಧಾರೆಯಾಗಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಸುತ್ತಮುತ್ತ ಉತ್ತಮ ಮಳೆ ಸುರಿದಿದ್ದರಿಂದ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಮನೆಗಳಿಗೆ ನುಗ್ಗಿದ ಮಳೆ ನೀರು; ರಸ್ತೆ ಸಂಪರ್ಕ ಕಡಿತ

ಕಲಬುರ್ಗಿ: ಬೀದರ್ ಜಿಲ್ಲೆಯ ಚಿಟಗುಪ್ಪ, ಬೀದರ್‌ ಹಾಗೂ ಹುಲಸೂರು ತಾಲ್ಲೂಕುಗಳಲ್ಲಿ ಸೋಮವಾರ ಬೆಳಗಿನ ಜಾವ ಭಾರೀ ಮಳೆಯಾಗಿದೆ.

ಚಿಟಗುಪ್ಪ ತಾಲ್ಲೂಕಿನ ಬಾದ್ಲಾಪುರ ಗ್ರಾಮದಿಂದ ಮದರಗಿ ಗ್ರಾಮಕ್ಕೆ ಹೋಗುವ ಒಳ ರಸ್ತೆಯ ತಳಮಟ್ಟದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಕೊಂಡಿದೆ.

ಹುಲಸೂರ ತಾಲ್ಲೂಕಿನ ಕಾಮಶೆಟ್ಟಿ ಕೆರೆಯ ಒಡ್ಡು ಒಡೆದು ಹೊಲಗಳಿಗೆ ನೀರು ನುಗ್ಗಿದೆ. ಕೊಟಮಾಳ ಸಮೀಪ ಹಳ್ಳ ಉಕ್ಕಿ ಹರಿದು ರೈತರ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆಗಳು ನೀರು ಪಾಲಾಗಿವೆ.
ಬೀದರ್‌ ತಾಲ್ಲೂಕಿನ ಗಾದಗಿಯಲ್ಲಿ ಹಳ್ಳ ಉಕ್ಕಿ ಹರಿದು ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದೆ. ಬೀದರ್‌ ತಾಲ್ಲೂಕಿನ ಗಾದಗಿಯಲ್ಲಿ 78 ಮಿ.ಮೀ. ಹಾಗೂ ಚಿಟಗುಪ್ಪದಲ್ಲಿ 67.5 ಮಿ.ಮೀ. ಮಳೆ ದಾಖಲಾಗಿದೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಬಳವಡ್ಗಿ ಮತ್ತು ಸೂಗೂರು (ಎನ್‌) ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಯಾದಗಿರಿ ಜಿಲ್ಲೆಯ ಮಲ್ಕಪ್ಪನಹಳ್ಳಿ ಮತ್ತು ಚಿತ್ತಾಪುರ ತಾಲ್ಲೂಕಿನ ಶಾಂಪುರಹಳ್ಳಿ, ರಾಂಪುರಹಳ್ಳಿ ನಡುವಿನ ರಸ್ತೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಯಾದಗಿರಿ ತಾಲ್ಲೂಕಿನ ಕೌಳೂರು ಗ್ರಾಮದಲ್ಲಿ ನಾಲ್ಕು ಮನೆಗಳು ಕುಸಿದಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ. ಭೀಮಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಭೀಮಾ ಸೇತುವೆ ಬಳಿ ಇರುವ ಕಂಗೇಳೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.

ಮೇಘ ಸ್ಫೋಟ: ಮೂವರ ಸಾವು

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮೇಘ ಸ್ಫೋಟದಿಂದಾಗಿ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಪುತ್ರಿಯರು ಸಾವಿಗೀಡಾಗಿದ್ದಾರೆ.

ಭಾನುವಾರ ರಾತ್ರಿ ಮಾಂಡವ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೆರೆಯ ಕಂಕಾರಿ ಗ್ರಾಮದಲ್ಲೂ ಮೇಘ ಸ್ಪೋಟದಿಂದಾಗಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ