ಮಂಡ್ಯ: ರಾಜಸ್ಥಾನದಿಂದ ರಾಜ್ಯಕ್ಕೆ ಬಕ್ರೀದ್ ವೇಳೆ ಮಾಂಸಕ್ಕೆ ಬಳಸಲು ತರುತ್ತಿದ್ದ 11 ಒಂಟೆಗಳನ್ನು ರಕ್ಷಿಸಿ, ನ್ಯಾಯಾಲಯದ ಆದೇಶದಂತೆ ಮರಳಿ ರಾಜಸ್ತಾನಕ್ಕೆ ಕಳುಹಿಸಲು ಬುಧವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಚಾಲನೆ ನೀಡಿ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು.
ಬಕ್ರೀದ್ ಸಂದರ್ಭದಲ್ಲಿ ರಾಜ್ಯಕ್ಕೆ ಮಾಂಸಕ್ಕೆ ಬಳಸಲು ಒಂಟೆಗಳನ್ನು ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿ ಬರುತ್ತಿದ್ದಾಗ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಹಾಗೂ ಬೆಂಬಲಿಗರು ಪ್ರಕರಣ ಪತ್ತೆ ಹಚ್ಚಿ ಚಿಂತಾಮಣಿ ಪೊಲೀಸರಿಗೆ ಒಪ್ಪಿಸಿ ನಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ಒಂಟೆಗಳನ್ನು ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಬಳಿ ಇರುವ ಚೈತ್ರಾ ಗೋಶಾಲೆಯಲ್ಲಿ ಬಿಟ್ಟು ಪಾಲನೆ ಮಾಡಲಾಗುತ್ತಿತ್ತು. ನಂತರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯದ ಆದೇಶದಂತೆ ಬುಧವಾರ ಪೊಲೀಸ್ ಭದ್ರತೆಯಲ್ಲಿ ಎರಡು ಲಾರಿಗಳಲ್ಲಿ ಮರಳಿ ರಾಜಸ್ತಾನಕ್ಕೆ ಕಳುಹಿಸಲಾಯಿತು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಮಾತನಾಡಿ, ಬಕ್ರೀದ್ ಹಬ್ಬದ ನೆಪದಲ್ಲಿ 11 ಒಂಟೆಗಳನ್ನು ಕೊಂದು ಮಾಂಸಕ್ಕೆ ಬಳಸಲು ರಾಜಸ್ಥಾನದಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಇವು ಚಿಕ್ಕಬಳ್ಳಾಪುರದ ಚಿಂತಾಮಣಿ ಬರುತ್ತಿದ್ದಾಗ ನಮಗೆ ಮಾಹಿತಿ ಬಂದಿದ್ದರಿಂದ ಕೂಡಲೇ ನಾವು ತೆರಳಿ ಕಾರ್ಯಕರ್ತರ ನೆರವಿನಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಅವುಗಳ ರಕ್ಷಣೆಗಾಗಿ ಪಾಂಡವಪುರದ ಬ್ಯಾಡರಹಳ್ಳಿ ಚೈತ್ರಾ ಶಾಲೆಗೆ ಬಿಡಲಾಗಿತ್ತು ಎಂದರು.
ನಮ್ಮ ಮಂಡಳಿಯಿಂದ ಇದುವರೆಗೂ ಸಾವಿರಾರು ಗೋವುಗಳನ್ನು ರಕ್ಷಿಸಲಾಗಿದೆ. ಒಂಟೆಗಳ ಪ್ರಕರಣ ನ್ಯಾಯಾಲಯದ ಆದೇಶದಂತೆ ವಾಪಸ್ ಕಳುಹಿಸುವಂತೆ ಆದೇಶ ನೀಡಿದ್ದರಿಂದ ನಾವು ಮತ್ತೆ ವಾಪಸ್ ರಾಜಸ್ತಾನಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಲೆಕ್ಟೊ ಕಚೇರಿಯ ಜಾಗರೂಕಾ ಅಧಿಕಾರಿ ಲವೀಶ್ ಮೊರಡಿಯಾ, ಡಿವೈಎಸ್ಪಿ ಮಂಜುನಾಥ್ ಇದ್ದರು.
Laxmi News 24×7