ಬಂಟ್ವಾಳ: ತಂದೆಯೇ ಸ್ವಂತ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ, ತಾನು ಸಹ ನೇಣು ಬಿಗಿದುಕೊಂಡು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿ ನಿವಾಸಿ ಬಾಬು ನಾಯ್ಕ ( 58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿ ತಂದೆ. ಸಾತ್ವಿಕ್ ( 15) ಕೊಲೆಯಾದ ಬಾಲಕ.ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಅವರು ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾಬು ನಾಯ್ಕ್ ಅವರ ಪತ್ನಿ ಗೇರು ಬೀಜದ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಮಧ್ಯಾಹ್ನ ಗಲಾಟೆ ನಡೆದಿದೆ.
ಬಳಿಕ ಮಗ ಸಾತ್ವಿಕ್ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಮನೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ಜಿ.ಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪುಂಜಾಲಕಟ್ಟೆ ಎಸ್‌ಐ ಸೌಮ್ಯ ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Laxmi News 24×7