ಬೆಂಗಳೂರು : ಕರ್ನಾಟಕದ ಭಾರತೀಯ ಜನತಾ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ನಾಯಕತ್ವ ಬದಲಾವಣೆ ಅನ್ನೋದು ನೂರಕ್ಕೆ ನೂರು ಸುಳ್ಳು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಅರುಣ್ ಸಿಂಗ್ ಭೇಟಿ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನಮ್ಮ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ಅದರ ಬಗ್ಗೆ ಮಾತುಕತೆ ನಡೆಸಿ ಗೊಂದಲ ನಿವಾರಣೆ ಮಾಡಲು ಅರುಣ್ ಸಿಂಗ್ ಬರುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯೇ ಪ್ರಮುಖ ಅಂಶ ಅನ್ನೋದು ಸುಳ್ಳು. ಭಾರತಿಯ ಜನತಾ ಪಾರ್ಟಿಯಲ್ಲಿ ಮಾತ್ರ ಈ ರೀತಿ ನಾಲ್ಕು ಗೋಡೆಯ ಮಧ್ಯದಲ್ಲಿ ಮಾತನಾಡುವ ಅವಕಾಶ ಇರುವುದು ಎಂದು ಹೇಳಿದರು.
ಇದೇ ಶಾಸಕರ, ಸಚಿವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ರೇಣುಕಾಚಾರ್ಯ, ಯೋಗೇಶ್ವರ್, ಸುನೀಲ್ ಕುಮಾರ್ ಎಲ್ಲರು ಮಾತನಾಡಿದಾರೆ ಹೌದು. ಅವರಿಗೆ ಮಾತನಾಡಬೇಡಿ ಅಂತ ನಾನು ಹೇಳಿದ್ದೇನೆ. ಆ ಕಾರಣಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಎಲ್ಲಾ ಗೊಂದಲ ಪರಿಹಾರವಾಗುತ್ತೆ ಎಂದರು.
ಇನ್ನು 17 ವಲಸಿಗರಿಂದಲೇ ಗೊಂದಲ ಸೃಷ್ಠಿ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಈಶ್ವರಪ್ಪ, 17 ಜನ ಬಂದಿದ್ದರಿಂದಲೇ ನಮಗೆ ಸರ್ಕಾರ ಬಂದಿದೆ. ಪೂರ್ಣ ಬಹುಮತ ಬಂದಿದ್ದರೆ ಈ ರೀತಿ ಸಮಸ್ಯೆ ಇರುತ್ತಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ನೀವು ಏನು ಬೇಕಾದರು ತಿಳಿದುಕೊಳ್ಳಿ. ಕೇಂದ್ರದ ನಾಯಕರು ಏನು ಹೇಳ್ತಾರೋ ಅದನ್ನ ಶಿರಸ್ಸಾವಹಿಸಿ ಪಾಲಿಸುತ್ತೇನೆ. ನಮ್ಮ ನಾಯಕರ ತೀರ್ಮಾನವನ್ನ ರಾಜ್ಯದ ಎಲ್ಲರು ಪಾಲಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
Laxmi News 24×7