ಬೆಳಗಾವಿ– ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಭೇಟಿ ದಿನಾಂಕ ನಿಗದಿಯಾಗಿದ್ದು, ಬೆಳಗಾವಿಯಲ್ಲಿ ಅಧಿಕಾರಿಗಳ ಸರಣಿ ಸಭೆ ಆರಂಭವಾಗಿದೆ.
ಕೊರೋನಾ ನಿಯಂತ್ರಣದಲ್ಲಿ ಆಗುತ್ತಿರುವ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಯಾರ ನಿಯಂತ್ರಣವೂ ಇಲ್ಲದೆ ಕೊರೋನಾ ಅವ್ಯವಸ್ಥೆ ತೀವ್ರವಾಗಿದೆ. ಯಾರಿಗೆ ಬೆಡ್ ಸಿಗುತ್ತದೆ, ಎಷ್ಟು ಜನ ಸಾಯುತ್ತಿದ್ದಾರೆ, ಯಾರಿಗೆ ಚಿಕಿತ್ಸೆ ಸಿಗುತ್ತಿದೆ ಯಾವುದೂ ಜನಸಾಮಾನ್ಯರಿಗಿರಲಿ, ಮಂತ್ರಿಗಳಿಗೂ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿಯ ಮಂತ್ರಿಗಳು, ಶಾಸಕರು ನಿರಂತರ ದೂರು ಸಲ್ಲಿಸಿದ್ದರು. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ವತಃ ಆಗಮಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಹೊರಟು ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ನಡೆಸಲಿದ್ದಾರೆ. ನಂತರ ಅವರು ಧಾರವಾಡಕ್ಕೆ ತೆರಳುವರು.
ಯಡಿಯೂರಪ್ಪ ಆಗಮನದ ದಿನ ನಿಗದಿಯಾಗುತ್ತಿದ್ದಂತೆ ಜಿಲ್ಲಾಡಳಿತ ಸರಣಿ ಸಭೆಗಳನ್ನು ಆರಂಭಿಸಿದೆ. ಅವ್ಯವಸ್ಥೆಗಳಿಗೆ ತೇಪೆ ಹಚ್ಚುವ ಕೆಲಸ ಆರಂಭಿಸಿದೆ. ಯಡಿಯೂರಪ್ಪ ಆಗಮನದ ನಂತರವಾದರೂ ಪರಿಸ್ಥಿತಿ ಸುಧಾರಿಸಿ ಜನರ ಜೀವ ಉಳಿಯುವಂತಾದರೆ ಅದೇ ದೊಡ್ಡ ಸಾಧನೆಯಾಗಲಿದೆ.
Laxmi News 24×7