Breaking News

ವಾಮಮಾರ್ಗದಲ್ಲಿ ಅಧಿಕಾರ ಹಿಡಿದವರಿಂದ ರಾಜ್ಯಕ್ಕೆ ನಿರಂತರ ಸಂಕಷ್ಟವೇ: ಕಾಂಗ್ರೆಸ್ ಟೀಕೆ

Spread the love

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ರಾಜ್ಯಕ್ಕೆ ‘ಕುಂಟು ಕುದುರೆಯ ಮೇಲೆ ಕುರುಡನ ಸವಾರಿ’ಯಂತಾಗಿದೆ. ಎಲ್ಲಿ ಹಾರುತ್ತದೋ, ಎಲ್ಲಿ ಬೀಳುತ್ತದೋ ತಿಳಿಯದೆ ಕಣ್ಮುಚ್ಚಿಕೊಂಡು ‘ದೇವರೇ ಗತಿ’ ಎನ್ನುವ ಸ್ಥಿತಿಗೆ ಬಂದಿದ್ದಾರೆ ಜನ. ಹಪಹಪಿಯಿಂದ ವಾಮಮಾರ್ಗದಲ್ಲಿ ಅಧಿಕಾರ ಹಿಡಿದವರಿಂದ ರಾಜ್ಯಕ್ಕೆ ನಿರಂತರ ಸಂಕಷ್ಟವೇ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಾಗ ನೆರೆ ಹಾವಳಿ, ಆ ಸಂದರ್ಭದಲ್ಲಿ ಸಂಪುಟವೇ ಇರಲಿಲ್ಲ. ಆನಂತರ ನೆರೆ ಪರಿಹಾರ ತರುವಲ್ಲಿಯೂ 25 ಸಂಸದರ ಸಹಿತ ಇಡೀ ಸರ್ಕಾರ ಸೋತಿದ್ದ ಪರಿಣಾಮ ಇಂದಿಗೂ ರಾಜ್ಯದ ಜನತೆ ಚೇತರಿಸಿಕೊಳ್ಳಲಿಲ್ಲ. ಎರಡೆರೆದು ಭಾರಿ ನೆರೆ ಬಂದಾಗಲೂ ಕೇಂದ್ರದ ಅಸಡ್ಡೆ ಧೋರಣೆಯನ್ನು ಪ್ರಶ್ನಿಸದೆ ಹೇಡಿಗಳಾಗಿ ಕುಳಿತರು, ನೆರೆ- ಬರದ ಸಂಕಷ್ಟದ ನಂತರ ರಾಜ್ಯಕ್ಕೆ ಕರೋನಾ ಭೀಕರತೆ ಎದುರಾಯಿತು, ಆಗಲೂ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತೆ ವಿನಃ ಜನರ ಕೈ ಹಿಡಿಯಲಿಲ್ಲ. 2ನೇ ಅಲೆಯ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿ, ಸಂಪುಟ ಕಿತ್ತಾಟ, ಸಿಡಿ ರಂಪಾಟದಲ್ಲಿ ಮುಳುಗಿತ್ತು ಬೇಜವಾಬ್ದಾರಿ ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಡಬಲ್ ಇಂಜಿನ್ ಸರ್ಕಾರಗಳಿಂದ ಅಭಿವೃದ್ಧಿಯ ಮಹಾಪರ್ವವೇ ಶುರುವಾಗಲಿದೆ ಎಂದು ಪುಂಗಿ ಊದಿದವರು 15ನೇ ಹಣಕಾಸು ಆಯೋಗದಲ್ಲಿ ಬರಬೇಕಾದ ಹಣವನ್ನೂ ಕೇಳಲಿಲ್ಲ, ಜಿಎಸ್ ಟಿ ಬಾಕಿ ಕೇಳಲಿಲ್ಲ, ನೆರೆ ಪರಿಹಾರ 1500 ಕೋಟಿ ಬಿಟ್ಟು ಮತ್ತೆ ಬರಲೇ ಇಲ್ಲ. ಇಷ್ಟೆಲ್ಲಾ ಅನ್ಯಾಯವಾದರೂ ಮೋದಿ ಭಜನೆ ಬಿಟ್ಟು ಬೇರೇನೂ ಮಾಡಲಿಲ್ಲ ಬಿಜೆಪಿಗರು ಎಂದು ಟೀಕಿಸಿದೆ.

ಈಗ ಕೋವಿಡ್ 2ನೇ ಅಲೆಯಿಂದ ರಾಜ್ಯ ಸ್ಮಶಾನದಂತಾಗುತ್ತಿದೆ. ಮೋದಿಯವರನ್ನು ಚಮತ್ಕಾರಿ ಬಾಬಾ ಎಂಬಂತೆ ಬಹುಪರಾಕ್ ಹಾಕುವ ಬಿಜೆಪಿ ಸಂಸದರು, ಸಚಿವರು ಆಕ್ಸಿಜನ್, ಪಿಎಂ ಕೇರ್ಸ್, ವ್ಯಾಕ್ಸಿನ್ ಎಲ್ಲದರಲ್ಲಿಯೂ ಕೇಂದ್ರ ಸರ್ಕಾರದ ಅನ್ಯಾಯವನ್ನು ಗಟ್ಟಿಯಾಗಿ ಪ್ರಶ್ನಿಸುವ ಧೈರ್ಯ ತೋರದೆ ಸರ್ವಾಧಿಕಾರಿಯ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದೆ.

ಕರ್ನಾಟಕದ ಬಗೆಗೆ ಕೇಂದ್ರ ಸರ್ಕಾರದ ಈ ಅಸಡ್ಡೆ, ದ್ವೇಷ ಯಡಿಯೂರಪ್ಪನವರ ಕಾರಣಕ್ಕೋ, ಕನ್ನಡಿಗರ ಮೇಲಿನ ಅಸಹನೆಯ ಕಾರಣಕ್ಕೋ ಎನ್ನುವುದನ್ನ ಬಿಜೆಪಿಗರೇ ಉತ್ತರಿಸಬೇಕು. ಬಿಎಸ್ ವೈ ಮುಕ್ತ ಬಿಜೆಪಿ ಮಾಡುವ ಇವರ ಅಜೆಂಡಾದ ಆಂತರಿಕ ಕಿತ್ತಾಟದಲ್ಲಿ ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ, ಈ ತುರ್ತು ಪರಿಸ್ಥಿತಿಯ ನಡುವೆಯೂ ಬಿಜೆಪಿ ವರ್ಸಸ್ ಬಿಜೆಪಿ ಬೇಕೇ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಪ್ರಶ್ನಿಸಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ