ಬೆಂಗಳೂರು: ‘ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಕಾಂಗ್ರೆಸ್ ರೂಪಿಸಿರುವ ₹ 100 ಕೋಟಿ ಯೋಜನೆಗೆ ಸರ್ಕಾರ ಅನುಮತಿ ನೀಡಲಿ. ನಾವೂ ಸರ್ಕಾರದ ಜತೆ ಕೈಜೋಡಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಜನರ ಜೀವ ಉಳಿಸುವುದು ಮುಖ್ಯ. ಅದೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳನ್ನು ನಂತರ ಮಾಡಿಕೊಳ್ಳೋಣ. ಈ ಕಾರಣಕ್ಕೆ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಲಸಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.
ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಶಾಸಕರ ನಿಧಿ 2 ಕೋಟಿ ರುಪಾಯಿಯಲ್ಲಿ ಶೇ.25 ರಷ್ಟು ಅನುದಾನ ಬಳಸಿಕೊಳ್ಳಲು ಸರ್ಕಾರ ಹೇಳಿದೆ. ಹಾಸಿಗೆ, ವೆಂಟಿಲೇಟರ್ ಖರೀದಿಗೆ ಬಳಸಲು ಅನುಮತಿ ಇದೆ. ಹೀಗಾಗಿ ನಾವು 100 ಕೋಟಿ ಮೊತ್ತದ ಕಾರ್ಯಕ್ರಮ ರೂಪಿಸಿ, ಸರ್ಕಾರದ ಅನುಮತಿ ಕೋರಿದ್ದೇವೆ.
ನಮ್ಮಲ್ಲಿ ಒಟ್ಟು 93 ಶಾಸಕರು ಹಾಗೂ ಪರಿಷತ್ ಸದಸ್ಯರಿದ್ದು, ಉಳಿದ ಮೊತ್ತವನ್ನು ನಮ್ಮ ಕಾರ್ಯಕರ್ತರ ಬಳಿ ಭಿಕ್ಷೆ ಎತ್ತಾದರೂ ಸಂಗ್ರಹಿಸುತ್ತೇವೆ. ಈ ಜನಪರ ಕೆಲಸಕ್ಕೆ ಸರ್ಕಾರ ಅನುಮತಿ ನೀಡಲಿ. ನಾವು ಕೂಡ ಸರ್ಕಾರದ ಜತೆ ಕೈ ಜೋಡಿಸಿ ಜನ ಸೇವೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Laxmi News 24×7