Breaking News

“ಕೊಟ್ಟ ಕುದುರೆ ಏರಲಾಗದವನು ಧೀರನೂ ಅಲ್ಲ- ಶೂರನೂ ಅಲ್ಲ, ಅಧಿಕಾರ ಬಿಟ್ಟು ತೊಲಗಿ”

Spread the love

ಬೆಂಗಳೂರು, -ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾವೇನ್‌ ನೋಟ್‌ ಪ್ರಿಂಟ್‌ ಮಾಡ್ತೀವಾ?, ಜಡ್ಜ್‌ಗಳು ಸರ್ವಜ್ಞರಲ್ಲ, ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು, ನೇಣು ಹಾಕಿಕೊಳ್ಳಲು ಆಗುತ್ತಾ?, ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ ಎಂದು ಹೇಳಿರುವುದು ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು ಎಂದು ಅವರು ಟೀಕಿಸಿದ್ದಾರೆ.

ಅವರು ಅಷ್ಟು ವರ್ಷ ಅಧಿಕಾರ ಮಾಡಿದರು, ಇವರು ಅಷ್ಟು ವರ್ಷ ತಿಂದರು ಎಂದು ದೂಷಿಸಿಕೊಂಡೇ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂಷಿಸುವ ಬಿಜೆಪಿಗೆ ಅಧಿಕಾರವೇಕೆ? ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತು ಬಿಜೆಪಿಗೆ ಹೊಂದುವಂಥದ್ದು ಅವರು ವಾಗ್ದಾಳಿ ಮಾಡಿದ್ದಾರೆ.

ಕೋವಿಡ್‌ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ. ಕೇಂದ್ರ ಕೋವಿಡ್‌ ಅನ್ನು ಅಸಮರ್ಪಕವಾಗಿ ನಿರ್ವಹಿಸಿದ್ದೇ ಇದಕ್ಕೆ ಕಾರಣ. ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದಿದೆ. ಇದು ರಾಜ್ಯ ಸರ್ಕಾರದ ಅಸಮರ್ಥತೆ ಎಂದು ಅವರು ಆರೋಪಿಸಿದ್ದಾರೆ.

ಅಸಮರ್ಥತೆ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೈಲಾಗದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ ಎಂದಿದ್ದಾರೆ.
ಪರಸ್ಪರ ಗೂಬೆ ಕೂರಿಸುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಖಯಾಲಿ. ಇದನ್ನು ಅರಿತೇ ಜನ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುತ್ತಿದ್ದಾರೆ.

ಕೋವಿಡ್‌ ನಿಭಾಯಿಸುವಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರವಿರುವ ರಾಜ್ಯಗಳು ಯಶಸ್ವಿಯಾಗಿವೆ. ಜನರಿಗೆ ಸವಲತ್ತು ನೀಡುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿರುವೆಡೆ ಅಂಥ ಬದ್ಧತೆ ಕಾಣುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ‌.

ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ವೇಳೆ ಜನರಿಗೆ ಆದ ತೊಂದರೆಗೆ ಈ ರಾಜ್ಯಗಳಲ್ಲಿ ಪರಿಹಾರಗಳನ್ನೂ ನೀಡಲಾಗಿದೆ. ಜನರಿಗೆ ಉಚಿತ ಆಹಾರ, ಆರೋಗ್ಯ ಸೇವೆ ನೀಡಲಾಗಿದೆ. ಜನರೆಡೆಗೆ ಪ್ರಾದೇಶಿಕ ಪಕ್ಷಗಳಿಗೆ ಇರುವ ಬದ್ಧತೆಗೆ ಇದು ಸಾಕ್ಷಿ ಎಂದಿದ್ದಾರೆ.

ಬಿಜೆಪಿ ನಾಯಕರು ಕೈಲಾಗದ ಮಾತು ಬಿಡಿ. ಜನರನ್ನು ಮತ್ತಷ್ಟು ನಿರಾಶರನ್ನಾಗಿಸಬೇಡಿ. ಜನರ ಆರೋಗ್ಯ, ಜೀವ ಮುಖ್ಯ. ಅದಕ್ಕಾಗಿ ಸಕಲವನ್ನೂ ಮಾಡಿ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸಚಿವರು ಶ್ರೀಕೃಷ್ಣನ ಮಾತುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಕರ್ತ್ಯವ್ಯ ನೀವು ಮಾಡಿ. ಈ ಮೂಲಕ ರಾಜ್ಯಕ್ಕೆ ಬರಬೇಕಾದ್ದನ್ನು ತನ್ನಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ