ಬೆಂಗಳೂರು, ಏ.23- ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಬೆಡ್ ಸೌಕರ್ಯವಿಲ್ಲದೆ ಪರದಾಡುತ್ತಿರುವ ಘಟನೆಗಳು ನಗರದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ನಿನ್ನೆ ರಾತ್ರಿಯಿಂದಲೂ ಸೋಂಕಿರೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಕುಟುಂಬಸ್ಥರು ಪರದಾಡುತ್ತ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಅವರಿಗೆ ಬೆಡ್ ಖಾಲಿ ಇಲ್ಲದೆ ದಾಖಲಿಸಿಕೊಂಡಿಲ್ಲದ್ದರಿಂದ ದಿಕ್ಕು ತೋಚದೆ ಕುಟುಂಬಸ್ಥರು ತಮ್ಮ ನೋವು ತೋಡಿಕೊಂಡರು.ಮುಂಬೈ ಮೂಲದ ಗೌತಮ್ ಜಯನಗರದ 3ನೆ ಬ್ಲಾಕ್‍ನಲ್ಲಿ ವಾಸವಿದ್ದಾರೆ. ಇವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ನಿನ್ನೆ ರಾತ್ರಿಯಿಂದಲೇ ನಗರದ ವಿವಿಧೆಡೆ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಎಲ್ಲೂ ದಾಖಲಿಸಿಕೊಂಡಿಲ್ಲ. ಇಂದು ಬೆಳಗ್ಗೆಯೂ ಆಸ್ಪತ್ರೆಗಳಿಗೆ ಸುತ್ತಾಡಿದ್ದ ಅವರಿಗೆ ದಿಕ್ಕು ತೋಚದಂತಾಗಿತ್ತು.
