Breaking News

ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್​ಡೌನ್ ಮಾಡಿದ ಅಧಿಕಾರಿಗಳು

Spread the love

ಬೆಳಗಾವಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು, ಇಂದಿನಿಂದ ಮೇ.4ರ ತನಕ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಕೆಲವೆಡೆ ಕಾರ್ಮಿಕರ ವಲಸೆ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಗೆ ಇದು ಮಾರಕವಾಗಿ ಪರಿಣಮಿಸುತ್ತಿದೆ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡಂಚಿನಲ್ಲಿರುವ ಪುಟ್ಟ ಗ್ರಾಮವಾದ ಅಬನಾಳಿ ಎಂಬಲ್ಲಿ ಬರೋಬ್ಬರಿ 146 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಇಡೀ ಗ್ರಾಮವನ್ನೇ ಸೀಲ್​ಡೌನ್ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಸ್ವಗ್ರಾಮಕ್ಕೆ ಬರುತ್ತಿರುವ ಕಾರ್ಮಿಕರಿಂದಲೇ ಕೊರೊನಾ ವೇಗವಾಗಿ ಹಬ್ಬುತ್ತಿದೆ ಎನ್ನಲಾಗುತ್ತಿರುವುದರಿಂದ ಸೋಂಕು ನಿಯಂತ್ರಿಸಲು ಕಠಿಣ ಕ್ರಮಗಳ ಮೊರೆ ಹೋಗಿದ್ದಾರೆ.

ಅಬನಾಳಿ ಗ್ರಾಮದಲ್ಲಿ ಏಪ್ರಿಲ್ 6 ರಂದು ಹೋಳಿ ಹುಣ್ಣಿಮೆ ನಿಮಿತ್ತ ಸಾತೇರಿ ದೇವಿ ಜಾತ್ರೆ ನಡೆದಿತ್ತು. ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು. ಊರ ಜಾತ್ರೆಯಾದ್ದರಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾರ್ಮಿಕರು ಮರಳಿ ಊರಿಗೆ ಬಂದಿದ್ದಾರೆ. ಅದಾಗಿ ಮೂರು ದಿನಗಳ ಅಂತರದಲ್ಲಿ ಅಂದರೆ ಏಪ್ರಿಲ್ 9ರ ಸುಮಾರಿಗೆ ಅಬನಾಳಿ ಗ್ರಾಮದ ಕೆಲವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ಇದಾದ ನಂತರ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಏಪ್ರಿಲ್ 10 ಮತ್ತು 11 ರಂದು ಅಬನಾಳಿ ಗ್ರಾಮದ 350 ಜನರ ಪೈಕಿ 249 ಜನರ ತಪಾಸಣೆ ನಡೆಸಿ ಮೂಗು ಹಾಗೂ ಗಂಟಲು ದ್ರವದ ಮಾದರಿಯನ್ನು ತೆಗೆದು RT-PCR ಪರೀಕ್ಷೆಗೆ ಕಳುಹಿಸಿದ್ದಾರೆ.

ಕೊರೊನಾ ಪರೀಕ್ಷೆಗೆ ಸಂಬಂಧಿಸಿದಂತೆ ನಿನ್ನೆ (ಏಪ್ರಿಲ್ 20) ವರದಿ ಲಭ್ಯವಾಗಿದ್ದು, ಸಂಗ್ರಹಿಸಿದ್ದ 249 ಮಾದರಿಗಳ ಪೈಕಿ 146 ಮಾದರಿಗಳು ಕೊವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಮೊದಲೇ ಪುಟ್ಟ ಗ್ರಾಮವಾಗಿರುವ ಅಬನಾಳಿಯೊಂದರಲ್ಲೇ ಹೀಗೆ ಸಾಲು ಸಾಲು ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಕಂಗಾಲಾದ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಧಾವಿಸಿದ್ದಾರೆ. ಖಾನಾಪುರ ತಹಶಿಲ್ದಾರ್ ರೇಷ್ಮಾ ತಾಳಿಕೋಟಿ, ಟಿಹೆಚ್‌ಒ ಡಾ.ಸಂಜೀವ್ ನಾಂದ್ರೆ ಹಾಗೂ ಇನ್ನಿತರರು ಭೇಟಿ ನೀಡಿ ಸೋಂಕಿತರನ್ನು ಊರ ಹೊರಗೆ ಕರೆದು ಕೂರಿಸಿ ಮುಂಜಾಗ್ರತಾ ಕ್ರಮದ ಪಾಠ ಮಾಡಿದ್ದಾರೆ. ಬಳಿಕ ಗ್ರಾಮದ ಹೊರವಲಯದಲ್ಲಿ ಮರದ ಕೊಂಬೆಗಳನ್ನು ಹಾಕಿ ಇಡೀ ಗ್ರಾಮವನ್ನೇ ಸೀಲ್‌ಡೌನ್ ಮಾಡಿದ್ದಾರೆ.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Spread the love ಬೆಳಗಾವಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ