ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ನಾ ಕೊಡೆ, ನಾ ಬಿಡೆ ಎನ್ನುವ ಸಂಘರ್ಷ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಿರತರನ್ನು ಮನವೊಲಿಸೋ ಪ್ರಯತ್ನಕ್ಕೆ ಇಳಿದಯಂತ ರಾಜ್ಯ ಸರ್ಕಾರ, ವಿವಿಧ ತಂತ್ರಗಾರಿಕೆ ಮೂಲಕ ನೌಕರರನ್ನು ಮುಷ್ಕರದಿಂದ ಸೇವೆಗೆ ಮರಳೋದಕ್ಕೆ ಪ್ರಯತ್ನಕ್ಕಿಳಿದಿದೆ. ಇದರ ಮಧ್ಯೆ ಇಂದಿನಿಂದ ರಾಜ್ಯ ಸರ್ಕಾರ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತೆ ತೀವ್ರಗೊಳಿಸಿದ್ದಾರೆ. ಇಂದಿನಿಂದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿ ಮುಂದೆ ತಟ್ಟೆ, ಜಾಗಟೆ ಬಡಿಯುವ ಮೂಲಕ ಪ್ರತಿಭಟನೆ ನಡೆಸೋದಕ್ಕೆ ಮುಂದಾಗಿದ್ದಾರೆ.
ಈ ಕುರಿತಂತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ಇಂದಿನಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಮತ್ತಷ್ಟು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ಇಂದು ಬೆಳಿಗ್ಗೆ 11 ಗಂಟೆಯಿಂದ ರಾಜ್ಯಾಧ್ಯಂತ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿಯ ಮುಂದೆ ತಟ್ಟೆ, ಜಾಗಟೆ ಬಡಿಯುವುದರೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮೂಲಕ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ನೌಕರರ ವಿರುದ್ಧ ವರ್ಗಾವಣೆ ಅಸ್ತ್ರ, ವಜಾಗೊಳಿಸುವಂತ ಕ್ರಮ ಕೈಗೊಂಡಿದೆ. ಅಲ್ಲದೇ ಮುಷ್ಕರ ನಿರತ ನೌಕರರ ಮಾರ್ಚ್ ತಿಂಗಳ ವೇತನ ಕೂಡ ತಡೆ ಹಿಡಿದಿದೆ. ಮುಷ್ಕರದಲ್ಲಿ ಪಾಲ್ಗೊಳ್ಳದೇ ಕೆಲಸ ನಿರ್ವಹಿಸುತ್ತಿರುವಂತ ಸಾರಿಗೆ ನೌಕರರಿಗೆ ಮಾರ್ಚ್ ತಿಂಗಳ ವೇತನ ಇಂದು ನೀಡಲಾಗುತ್ತಿದೆ ಎಂಬುದಾಗಿ ಹೇಳಿದೆ. ಅಲ್ಲದೇ ಸಾರಿಗೆ ಬಸ್ ಪಾಸ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಂತ ಪ್ರಯಾಣಿಕರಿಗೆ ಮುಷ್ಕರದ ಅವಧಿಯಷ್ಟು ದಿನ, ಬಸ್ ಪಾಸ್ ವ್ಯಾಲಿಡಿಟಿ ವಿಸ್ತರಣೆಯಂತ ಕ್ರಮವನ್ನು ಕೂಡ ಕೈಗೊಂಡಿದೆ.
Laxmi News 24×7