Breaking News

ಉಪ ಚುನಾವಣೆ ಹೊಸ್ತಿಲಲ್ಲಿ ಲಿಂಗಾಯತ ಮುಖಂಡನ ಸೆಳೆದ ಸತೀಶ ಜಾರಕಿಹೊಳಿ

Spread the love

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಹಾಗೂ ಲಿಂಗಾಯತ ಸಮಾಜದ ಮುಖಂಡ ಅಶೋಕ ಪೂಜಾರಿ ಅವರನ್ನು ಪಕ್ಷದತ್ತ ಸೆಳೆಯುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಅವರು ನೀಡಿದ ಆಹ್ವಾನ ಮನ್ನಿಸಿರುವ ಪೂಜಾರಿ, ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಪ್ರಕಟಿಸಿದ್ದಾರೆ.

ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಬದಲಾವಣೆ ಆಗಬೇಕು ಎನ್ನುವುದು ಅಲ್ಲಿನ ಜನರು, ಹಿತೈಷಿಗಳು ಹಾಗೂ ಅಭಿಮಾನಿಗಳ ಒತ್ತಾಸೆಯಾಗಿದೆ. ಅದೇ ನನ್ನ ಮುಖ್ಯ ಗುರಿಯಾಗಿದೆ. ಅದನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅನಿವಾರ್ಯವಾಗಿ ಪಕ್ಷ ಬದಲಾವಣೆ ಮಾಡಬೇಕಾಗಿದೆ’ ಎಂದು ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಮುಖಂಡರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಅಶೋಕ ಪಟ್ಟಣ ಮೊದಲಾದವರು ಪಕ್ಷಕ್ಕೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಭಾನುವಾರ ಹಿತೈಷಿಗಳು ಮತ್ತು ಮುಖಂಡರ ಸಭೆ ಕರೆದಿದ್ದೆ. ಗೋಕಾಕದ ವ್ಯವಸ್ಥೆ ಬದಲಾವಣೆಗೆ ಕಾಂಗ್ರೆಸ್‌ ಸೇರಿ ಎಂದು ಅವರು ಬೆಂಬಲ ನೀಡಿದ್ದಾರೆ. ಏ.2ರ ನಂತರ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದೇನೆ’ ಎಂದು ಹೇಳಿದರು.

‘ಅಶೋಕ ಭಾನುವಾರ ನನ್ನೊಂದಿಗೆ ಮಾತನಾಡಿದ್ದಾರೆ. ನಾನಿನ್ನೂ ಪಕ್ಷದ ಹಿರಿಯರ ಜೊತೆ ಚರ್ಚಿಸಬೇಕಿದೆ. ನಂತರ ನಿರ್ಧಾರ ತಿಳಿಸುವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

ಅಶೋಕ ಪೂಜಾರಿ ಅವರು ಗೋಕಾಕ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. 2008 ಮತ್ತು 2013ರಲ್ಲಿ ಜೆಡಿಎಸ್‌, 2018ರಲ್ಲಿ ಬಿಜೆಪಿ ಮತ್ತು 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ