ಬೆಂಗಳೂರು: ಪ್ರತಿಯೊಬ್ಬ ಕೋವಿಡ್ ಸೋಂಕಿತ ವ್ಯಕ್ತಿಯ ಜತೆ 20 ಮಂದಿ ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವಾಗದೇ ಆರೋಗ್ಯ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ 20 ಮಂದಿ ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡುವ ಗುರಿಯನ್ನು ನಿಗದಿ ಮಾಡಿತ್ತು. ಆದರೆ, ಆರೋಗ್ಯ ಸಿಬ್ಬಂದಿಗೆ ಸೋಂಕಿತರ ಪ್ರಯಾಣದ ಇತಿಹಾಸ ಹಾಗೂ ಸಂಪರ್ಕದ ಜಾಡನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸದ್ಯ ಪ್ರತಿ ಕೋವಿಡ್ ಪೀಡಿತ ವ್ಯಕ್ತಿಗೆ ಸರಾಸರಿ 4.5 ಮಂದಿ ಸಂಪರ್ಕಿತರನ್ನು ಮಾತ್ರ ಪತ್ತೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಕಾರಣ ಎರಡನೇ ಅಲೆಯ ಮುನ್ಸೂಚನೆ ನೀಡಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಸೋಂಕಿತರ ಸಂಪರ್ಕ ಪತ್ತೆ ಹಾಗೂ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಶೇ 95.9 ರಷ್ಟು ಸೋಂಕಿತರಿಗೆ ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇನ್ನೊಂದೆಡೆ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗಳಿಗೆ ತೆರಳಿ, ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಸೋಂಕಿತರ ಸಂಪರ್ಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಮಾಡಿ, ಅವರನ್ನು ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಿ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಸಂಪರ್ಕ ಪತ್ತೆ, ಸಾಂಸ್ಥಿಕ ಕ್ವಾರಂಟೈನ್, ನೇರ ಮತ್ತು ಪರೋಕ್ಷ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಕೈಬಿಡಲಾಗಿತ್ತು. ಇದರಿಂದಾಗಿ ರಾಜ್ಯದ ವಿವಿಧೆಡೆ ನಡೆಸಿದ ರ್‍ಯಾಂಡಮ್ ಪರೀಕ್ಷೆಯಲ್ಲಿ ರೋಗಿ ಜತೆ ಪರೋಕ್ಷ ಸಂಪರ್ಕ ಹೊಂದಿದವರೂ ಸೋಂಕಿತರಾಗಿರುವುದು ದೃಢಪಟ್ಟಿತ್ತು. ಹೀಗಾಗಿಯೇ ಈಗ ಸಂಪರ್ಕ ಪತ್ತೆ ಕಾರ್ಯವನ್ನು ಚುರುಕುಗೊಳಿಸಿ, ಸೋಂಕು ಹರಡುವಿಕೆಗೆ ತಡೆಯೊಡ್ಡಲು ತಜ್ಞರು ಸೂಚಿಸಿದ್ದಾರೆ.
ಗುರಿ ತಲುಪುವ ಸವಾಲು: ಲಕ್ಷಣ ಇರದಿದ್ದರೂ ಕೋವಿಡ್ ಪರೀಕ್ಷೆಗೆ ಒಳಗಾದಾಗ ಕೆಲವರು ಸೋಂಕಿತರಾಗಿರುವುದು ಖಚಿತವಾಗಿದೆ. ಪರಿಣಾಮ ವ್ಯಕ್ತಿಗೆ ಹೇಗೆ ಸೋಂಕು ತಗುಲಿತು, ಎಷ್ಟು ಮಂದಿಯ ಜತೆಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆ ಮಾಡಲು ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮಾ.1ರಿಂದ ಮಾ.17ರ ಅವಧಿಯಲ್ಲಿ 14,186 ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 33,251 ಮಂದಿ ಪರೋಕ್ಷ ಸಂಪರ್ಕಿತರು ಸೇರಿದಂತೆ ಒಟ್ಟು 63,247 ಮಂದಿ ಸಂಪರ್ಕಿತರನ್ನು ಗುರುತಿಸಲಾಗಿದೆ. 1,420 ಸೋಂಕಿತರಿಗೆ ಯಾವುದೇ ಸಂಪರ್ಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಸಿಬ್ಬಂದಿಗೆ ಸಾಧ್ಯವಾಗಿಲ್ಲ.
‘ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ಪ್ರತಿ ಸೋಂಕಿತ ವ್ಯಕ್ತಿಗೆ 20 ಮಂದಿ ಸಂಪರ್ಕಿತರನ್ನು ಪತ್ತೆ ಮಾಡಲು ಸೂಚಿಸಲಾಗಿದೆ. ಈ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆಯಲಿದೆ. ಈ ಕಾರ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಇದ್ದಾರೆ. ಸೋಂಕಿತರು ಸೂಕ್ತ ಮಾಹಿತಿಯನ್ನು ಒದಗಿಸಿ, ಸಹಕರಿಸಿದಲ್ಲಿ ಸಂಪರ್ಕ ಪತ್ತೆ ಸುಲಭವಾಗುತ್ತದೆ’ ಎಂದು ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ತಿಳಿಸಿದರು.
Laxmi News 24×7