Breaking News

ಮತ್ಸ್ಯೋದ್ಯಮಕ್ಕೆ ಬೇಕಿದೆ ನೆರವಿನ ಟಾನಿಕ್‌

Spread the love

ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ ಮೇಲೆ ಮೀನುಗಾರರು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರೇ ಇರುವುದರಿಂದ ಸಹಜವಾಗಿ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಕೊಡುಗೆಗಳು ಸಿಗುವ ನಿರೀಕ್ಷೆಗಳಿವೆ.

ಕೋವಿಡ್‌ನಿಂದ ನಲುಗಿರುವ ಪ್ರವಾಸೋದ್ಯಮಕ್ಕೆ ಚೇತರಿಕೆ, ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಮೀನುಗಾರರಿಗೆ ನೆರವು, ಸಣ್ಣ ಉದ್ಯಮಗಳಿಗೆ ಆರ್ಥಿಕ ಪುನಶ್ಚೇತನ, ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಅಸ್ತು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ, ಕಾಡುಪ್ರಾಣಿಗಳ ಉಪಟಳದಿಂದ ರೈತರ ಬೆಳೆ ರಕ್ಷಣೆಗೆ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಸಿಗಲಿದೆಯೇ ಎಂಬ ನಿರೀಕ್ಷೆಗಳು ಗರಿಗೆದರಿವೆ.

ಮೀನುಗಾರರ ಬೇಡಿಕೆ ಏನು?

ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಬಜೆಟ್‌ನಲ್ಲಿ ಮತ್ಸ್ಯೋದ್ಯಮಕ್ಕೆ ಚೇತರಿಕೆ ನೀಡುವಂತಹ ಕಾರ್ಯಕ್ರಮಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆ ಮೀನುಗಾರರದ್ದು. ಡೆಲಿವರಿ ಪಾಯಿಂಟ್‌ನಲ್ಲಿ ಡೀಸೆಲ್‌ ಪೂರೈಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು, ಡೀಸೆಲ್ ಪ್ರಮಾಣವನ್ನು 300 ರಿಂದ 400 ಲೀಟರ್‌ಗೆ ಹೆಚ್ಚಿಸಬೇಕು, ಡೀಸೆಲ್ ದರ ಇಳಿಕೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ.

ಡೀಸೆಲ್ ಸಬ್ಸಿಡಿಯನ್ನು ಬ್ಯಾಂಕ್‌ ಖಾತೆಗೆ ಹಾಕುವ ಬದಲು ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್‌ ನೀಡಬೇಕು. ಮಲ್ಪೆಯ ಬಂದರನ್ನು ನಿಯಮಿತವಾಗಿ ಹೂಳೆತ್ತಬೇಕು, ಮೀನುಗಾರರಿಗೆ 10,000 ಕೋಟಿ ಪ್ಯಾಕೇಜ್‌ ಘೋಷಿಸಬೇಕು, ಮಾಸಿಕ ಕೋಟದ ಬದಲಾಗಿ ವಾರ್ಷಿಕ ಕೋಟದಲ್ಲಿ ಡೀಸೆಲ್ ವಿತರಿಸಬೇಕು ಎಂದು ಒತ್ತಾಯಿಸುತ್ತಾರೆ ಕೃಷ್ಣ ಸುವರ್ಣ.

ರೈತರ ಬೇಡಿಕೆಗಳು ಏನು?

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ ಮೌಲ್ಯವರ್ಧನೆ ಹಾಗೂ ಸಂಸ್ಕರಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದ್ದು, ಬಜೆಟ್‌ನಲ್ಲಿ ಜಿಲ್ಲೆಗೆ ಶೀಥಲೀಕರಣ ಘಟಕ ಘೋಷಿಸಬೇಕು. ಇದರಿಂದ ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಸಾಧ್ಯವಾಗಲಿದ್ದು ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಗೊಂದು ಉತ್ಪನ್ನ ಮಾನದಂಡದಡಿ ಕರಾವಳಿಯಲ್ಲಿ ಮೀನುಗಾರಿಕೆಗೆ ಒತ್ತು ನೀಡಲಾಗಿದೆ. ತೆಂಗು ಹಾಗೂ ಭತ್ತಕ್ಕೆ ಉತ್ತೇಜನ ಸಿಗಬೇಕು ಎನ್ನುತ್ತಾರೆ ಭಾರತೀಯ ಕಿಸಾನ್‌ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಬೇಕು, ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳ್ಳಬೇಕು, ಜತೆಗೆ ಕಾಡುಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಉಡುಪ.

ಕಾರ್ಮಿಕರ ಬೇಡಿಕೆ ಏನು?

ರಿಕ್ಷಾ, ಟ್ಯಾಕ್ಸಿ, ಬಸ್‌ ಹಾಗೂ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ವಾಹನಗಳ ಚಾಲಕರು ಪಿಎಫ್‌, ಇಎಸ್‌ಐ, ಕನಿಷ್ಠ ವೇತನ ಇಲ್ಲದೆ ದುಡಿಯುತ್ತಿದ್ದು, ಇವರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು. ಶ್ರಮಜೀವಿಗಳಾದ ಮೀನುಗಾರರ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ, ಅವಘಡ ವಿಮೆ, ಪಿಂಚಣಿ ಸಿಗಬೇಕು. ಕಾರ್ಮಿಕ ವಿರೋಧಿ ಹಾಗೂ ಮಾಲೀಕರ ಪರವಾಗಿರುವ ಕೇಂದ್ರದ ಲೇಬರ್‌ ಕೋಡ್‌ಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸುತ್ತಾರೆ ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ.

ಶಿಕ್ಷಣ ತಜ್ಞರ ಬೇಡಿಕೆಗಳು ಏನು?

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬೇಕಿದ್ದು, ಶಿಕ್ಷಕರ ನೇಮಕಾತಿಗೆ ವಿಶೇಷ ಪ್ರಾಶಸ್ತ್ಯ ನೀಡಬೇಕು, ಸರ್ಕಾರಿ ಶಾಲೆಗಳ ಭೌತಿಕ ಸ್ವರೂಪ ಸುಧಾರಣೆಗೆ ಒತ್ತು ನೀಡಬೇಕು, ಶಾಲಾ ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಒದಗಿಸುವುದು, ಗುಣಾತ್ಮಕ ಕಲಿಕೆಗೆ ಕಂಪ್ಯೂಟರ್‌, ಎಲ್‌ಸಿಡಿ ಪ್ರೊಜೆಕ್ಟರ್, ಸ್ಟುಡಿಯೋಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರಾದ ಮಹಾಬಲೇಶ್ವರ ರಾವ್‌.

ರಂಗಭೂಮಿ ಬೇಡಿಕೆ ಏನು?

ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಬೇಕು ಎಂಬುದು ರಂಗಾಸಕ್ತರ ದಶಕಗಳ ಬೇಡಿಕೆ. ವಿ.ಎಸ್‌.ಆಚಾರ್ಯ ಅವರು ಸಚಿವರಾಗಿದ್ದಾಗ ಜಿಲ್ಲಾ ರಂಗಮಂದಿರ ಸ್ಥಾಪನೆಗೆ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಘೋಷಿಸಿ ₹ 50 ಲಕ್ಷ ಬಿಡುಗಡೆಯಾಗಿತ್ತು. ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಾಗ 10 ಕೋಟಿ ಬಿಡುಗಡೆಗೆ ಆಶ್ವಾಸನೆ ಸಿಕ್ಕಿತ್ತಾದರೂ ಬಿಡುಗಡೆಯಾಗಲಿಲ್ಲ. ಈಬಾರಿಯಾದರೂ ಜಿಲ್ಲಾ ರಂಗ ಮಂದಿರಕ್ಕೆ ಅಗತ್ಯ ಅನುದಾನ ಬಿಡುಗಡೆಯಾದರೆ ರಂಗ ಚಟುವಟಿಕೆಗಳ ಆಯೋಜನೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ರಂಗಕರ್ಮಿ ಪ್ರದೀಪ್ ಚಂದ್ರ ಕುತ್ಪಾಡಿ.


Spread the love

About Laxminews 24x7

Check Also

ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Spread the love ವಿಜಯಪುರ :ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ* ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ