Breaking News

ಮಠದ ಆಸ್ತಿ ಕಬಳಿಸಲು ಹುನ್ನಾರ: ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆರೋಪ

Spread the love

ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಗುಂಪೊಂದು ಹುನ್ನಾರ ನಡೆಸಿದೆ ಎಂದು ಮಹಾಸಂಸ್ಥಾನದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆರೋಪ ಮಾಡಿದರು.

‘ಈಚೆಗೆ ಮಠದೊಳಗೆ ಏಕಾಏಕಿ ನುಗ್ಗಿದ ಗುಂಪೊಂದು ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದೇವೆ. ಅದೇ ಊರಿನವರೇ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಹಾಸಂಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸಾವಿರಾರು ಎಕರೆ ಜಮೀನು ಇದೆ. ಸಮಿತಿ ರಚಿಸಿಕೊಂಡರೆ ಆಸ್ತಿ ಕಬಳಿಸಲು ಅನುಕೂಲವಾಗುತ್ತದೆ ಎಂಬ ದುರುದ್ದೇಶದಿಂದ ಕೆಲವರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪಿಗೆ ನೀಡದ ಕಾರಣ ಮಠ, ದೇವರ ಗರ್ಭಗುಡಿಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.

‘ದಶಕಗಳ ಹಿಂದೆ ಕೆಲವರು ಮಠದ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಶಿವಮೊಗ್ಗ ಸೇರಿ ರಾಜ್ಯದ ಕೆಲವೆಡೆ ವ್ಯಾಜ್ಯ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಂಸ್ಥಾನದ ಆಸ್ತಿ ಇನ್ನೊಬ್ಬರ ಸ್ವತ್ತಾಗಲು ಬಿಡುವುದಿಲ್ಲ. ಸಮಿತಿ ರಚನೆಗೂ ಅವಕಾಶ ನೀಡುವುದಿಲ್ಲ’ ಎಂದರು.

‘ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಯಾವುದೇ ರಾಜ್ಯದಲ್ಲಿ ಮಠಕ್ಕಾಗಲಿ, ಸಂಸ್ಥಾನಕ್ಕಾಗಲಿ ಸಮಿತಿ ರಚಿಸಿಲ್ಲ. ಕೂಡಲಿ ಸಂಸ್ಥಾನದ ಸಮಿತಿ ವಿಚಾರ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ದಾವೆ ಹೂಡಿದ ಮಠದ ಭಕ್ತರೊಬ್ಬರು ಈಗ ಸಮಿತಿ ಬೇಕು ಎನ್ನುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಮಠಕ್ಕೆ ಬೇರೆಯವರು ಸ್ವಾಮೀಜಿ ಆಗುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗಿದೆ. ಇದು ಸತ್ಯಕ್ಕೆ ದೂರವಾದುದು. ಈಗಲೂ ನಾನೇ ಸ್ವಾಮೀಜಿಯಾಗಿ ಮುಂದುವರೆದಿದ್ದೇನೆ. ಎಲ್ಲ ವ್ಯವಹಾರ ನೋಡಿಕೊಳ್ಳುತ್ತ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಯಾರು ಅರ್ಹರು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ, ಶಾಸ್ತ್ರೋಕ್ತವಾಗಿ ಪೀಠಾಧಿಪತಿಯನ್ನು ಆಯ್ಕೆ ಮಾಡಲಾಗುವುದು’ ಎಂದರು.

ಸದ್ಯ ಮಠದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ಯಾವಾಗ ಬೇಕಾದರೂ ಮತ್ತೊಮ್ಮೆ ಹಲ್ಲೆಗೆ ಪ್ರಯತ್ನಿಸಬಹುದು. ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಚಿತ್ರದುರ್ಗದ ಶಾಖಾ ಮಠದಲ್ಲಿ ಕೆಲ ದಿನಗಳ ಕಾಲ ಉಳಿದುಕೊಂಡು ನಂತರ ಮೂಲಮಠಕ್ಕೆ ತೆರಳಲಿದ್ದೇನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಧಾರವಾಡದಲ್ಲಿ 54 ಜೂಜಾಟದ ಪ್ರಕರಣಗಳು ದಾಖಲು

Spread the love ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿ ಸಂಗ್ರಹಿಸಿ ಅಕ್ಟೋಬರ್​​ 20 ರಿಂದ 23ರವರೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ