ಬೆಳಗಾವಿ – ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಬೆಳಗಾವಿ ರಿಂಗ್ ರಸ್ತೆಗೆ ಕನಿಷ್ಠ 190 ಕೋಟಿ ರೂ. ಮೀಸಲಿರಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಂಜೆ ಹಿಂದವಾಡಿಯ ಹಿಂದ್ ಸೋಶಿಯಲ್ ಕ್ಲಬ್ ನಲ್ಲಿ ಬೆಳಗಾವಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಒಕ್ಕೂಟ (ಎಫ್ಒಎಬಿ) ಸಂಘಟಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಿಂಗ್ ರಸ್ತೆ ಬಹಳ ವರ್ಷದಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಬಜೆಟ್ ನಲ್ಲಿ ಕನಿಷ್ಟ 190 ಕೋಟಿ ಮೀಸಲಿರಲಿದೆ ಎಂದರು.
ಬೆಳಗಾವಿ ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ನಾಲ್ಕು ಲೇನ್ ಅಗಲೀಕರಣ ಮಾಡುವ ಕುರಿತು ಸಹ ಪ್ರಯತ್ನಿಸುತ್ತೇನೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡುವಂತೆ ಕೋರುತ್ತೇನೆ. ಅದೂ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅಭಯ ಪಾಟೀಲ ಹೇಳಿದರು.
Laxmi News 24×7