ಬೆಂಗಳೂರು: ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದರು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನು ಸುಪ್ರೀಂಕೋರ್ಟ್ನಲ್ಲಿರುವಾಗಲೇ ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಿಸಿ, ಬೆಳಗಾಂ ಹೆಸರು ಬದಲಾಯಿಸಲಾಗಿದೆ.
ಇದು ನ್ಯಾಯಾಂಗ ನಿಂದನೆ. ನಮ್ಮ ಪ್ರದೇಶವನ್ನು ಗೆಲ್ಲುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಠಾಕ್ರೆ ತಿಳಿಸಿದ್ದರು. ಠಾಕ್ರೆಯ ಈ ಮಾತುಗಳಿಗೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್ಡಿಕೆ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಬೆಳಗಾವಿ ವಿಚಾರದಲ್ಲಿ ಸುಖಾ ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದರಿಂದಲೇ ನನ್ನ ಸರ್ಕಾರದ ಅವಧಿಯಲ್ಲಿ ಅಲ್ಲಿ ವಿಧಾನಸೌಧ ನಿರ್ಮಿಸಿ, ಅಧಿವೇಶನ ನಡೆಸಿದೆವು ಎಂದಿದ್ದಾರೆ.
ಮಹಾರಾಷ್ಟ್ರದ ಹಠದಿಂದಲೇ ರಚನೆಯಾದ ಮಹಾಜನ ಸಮಿತಿ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಒಪ್ಪದ ಮಹಾರಾಷ್ಟ್ರ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡುತ್ತಿರುವ ಉದ್ಧವ ಠಾಕ್ರೆ, ವಿಚಾರಣೆಯ ದಿಕ್ಕನ್ನೇ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ.
 Laxmi News 24×7
Laxmi News 24×7
				 
		 
						
					