ಈ ವರ್ಷ ಡಿಸೆಂಬರ್ 31ನೇ ತಾರೀಕು ಆದಾಯ ತೆರಿಗೆಯ ಐಟಿಆರ್ ಫೈಲಿಂಗ್ ಗಡುವು ಮುಕ್ತಾಯ ಆಗುತ್ತದೆ. ಒಂದು ವೇಳೆ ಅಷ್ಟರೊಳಗೆ ಫೈಲಿಂಗ್ ಆಗಲಿಲ್ಲ ಅಂದರೆ ಏನಾಗುತ್ತದೆ ಗೊತ್ತಾ? ಕಳೆದ ವರ್ಷಕ್ಕೂ ಈ ಸಲಕ್ಕೂ ವ್ಯತ್ಯಾಸ ಇದೆ. ಕಳೆದ ವರ್ಷದಲ್ಲಿ ಏನಾದರೂ ಗಡುವು ಮುಗಿದ ಕೆಲ ತಿಂಗಳ ನಂತರ ಫೈಲಿಂಗ್ ಮಾಡಿದರೂ ಅದಕ್ಕೆ ದಂಡ ಅಂತ 5000 ರುಪಾಯಿ ಹಾಕಲಾಗುತ್ತಿತ್ತು. ಈ ವರ್ಷ ಆ ಮೊತ್ತ 10,000 ರುಪಾಯಿ ಆಗಿದೆ.
ಅಂದ ಹಾಗೆ, ಈ ದಂಡ ಅಥವಾ ವಿಳಂಬ ಫೈಲಿಂಗ್ ಶುಲ್ಕ ಅನ್ವಯ ಆಗುವುದು ನಿಮ್ಮ ನಿವ್ವಳ ಆದಾಯವು (ಎಲ್ಲ ಅರ್ಹ ವಿನಾಯಿತಿ ಹಾಗೂ ಕಡಿತ ಪಡೆದುಕೊಂಡ ನಂತರದ ಆದಾಯ) ಹಣಕಾಸು ವರ್ಷದಲ್ಲಿ 5 ಲಕ್ಷ ರುಪಾಯಿ ದಾಟಿದ್ದರೆ ಮಾತ್ರ. ಒಂದು ವೇಳೆ ನಿವ್ವಳ ಆದಾಯವು ಹಣಕಾಸು ವರ್ಷದಲ್ಲಿ 5 ಲಕ್ಷ ರುಪಾಯಿ ದಾಟಿಲ್ಲ ಎಂದಾದದಲ್ಲಿ ದಂಡ ಶುಲ್ಕ 1000 ರುಪಾಯಿ ಆಗುತ್ತದೆ.
ವೈಯಕ್ತಿಕ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ (ಐಟಿಆರ್)ಗೆ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 31 ಕೊನೆ ದಿನವಾಗಿರುತ್ತದೆ. ಒಂದು ವೇಳೆ ಅದು ಮೀರಿದಲ್ಲಿ ತಡವಾಗಿ ಅದೇ ವರ್ಷ ಡಿಸೆಂಬರ್ 31ನೇ ತಾರೀಕಿಗೂ ಮುಂಚೆ 5000 ರುಪಾಯಿ ವಿಳಂಬ ಶುಲ್ಕ ಪಾವತಿಸಿ ಫೈಲಿಂಗ್ ಮಾಡಬೇಕು.
ಆದರೆ, ಆ ಅಸೆಸ್ ಮೆಂಟ್ ವರ್ಷದ ಮಾರ್ಚ್ 31ಕ್ಕೂ ಮುಂಚೆ ಫೈಲ್ ಮಾಡಬೇಕಾಗುತ್ತದೆ. ಆಗ ವಿಳಂಬವಾಗಿ ಫೈಲ್ ಮಾಡಿದ್ದಕ್ಕೆ ಶುಲ್ಕವಾಗಿ 10 ಸಾವಿರ ಪಾವತಿಸಬೇಕಾಗುತ್ತದೆ. ಈಗಾಗಲೇ ಜುಲೈ 31ರ ಗಡುವು ಮುಗಿದಿದ್ದು, ಡಿಸೆಂಬರ್ 31 ಸಹ ದಾಟಿದಲ್ಲಿ ಹತ್ತು ಸಾವಿರ ರುಪಾಯಿ ದಂಡ ಬೀಳುತ್ತದೆ.
ಚಾರ್ಟರ್ಡ್ ಅಕೌಂಟೆಂಟ್ ವೊಬ್ಬರು ಈ ಬಗ್ಗೆ ಮಾತನಾಡಿ, ಐಟಿಆರ್ ಫೈಲಿಂಗ್ ದಿನವನ್ನು ಡಿಸೆಂಬರ್ 31, 2020ರ ತನಕ ವಿಸ್ತರಿಸಲಾಗಿತ್ತು. ಈಗ 2021ರ ಜನವರಿಯಿಂದ ಮಾರ್ಚ್ ಮಧ್ಯೆ ಹಣಕಾಸು ವರ್ಷ 2019- 20ರ ಐಟಿಆರ್ ಫೈಲಿಂಗ್ ಮಾಡಿದಲ್ಲಿ ವಿಳಂಬವಾಗಿದ್ದಕ್ಕೆ ಶುಲ್ಕ 10,000 ರುಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಡವಾಗಿ ಫೈಲಿಂಗ್ ಮಾಡಿದ್ದಕ್ಕೆ ಸೆಕ್ಷನ್ 234F ಅಡಿಯಲ್ಲಿ ವಿಳಂಬ ಶುಲ್ಕವನ್ನು ಎರಡು ಬಗೆಯಲ್ಲಿ ಹಾಕಲಾಗುತ್ತದೆ.
* ಐಟಿಆರ್ ತಡವಾಗಿ, ಅಂದರೆ ಗಡುವಿನ ನಂತರ- ಆದರೆ ಡಿಸೆಂಬರ್ 31ನೇ ತಾರೀಕಿನ ಮುಂಚೆಯಾದಲ್ಲಿ ರು. 5000.
* 2021ರ ಜನವರಿಯಿಂದ ಮಾರ್ಚ್ ಮಧ್ಯೆ ITR ಫೈಲ್ ಮಾಡಿದಲ್ಲಿ 10,000 ರುಪಾಯಿ.
ಇನ್ನು ಯಾವ ತೆರಿಗೆದಾರರ ಆದಾಯವು 5 ಲಕ್ಷ ರುಪಾಯಿ ದಾಟಿಲ್ಲವೋ ಅಂಥವರಿಗೆ 1000 ರುಪಾಯಿ ದಂಡ ಶುಲ್ಕ ಇರುತ್ತದೆ. ಇನ್ನು ಯಾರ ಆದಾಯವು ವಿನಾಯಿತಿಯ ಮಿತಿಯನ್ನು ಮೀರಿ, ಸಂಪೂರ್ಣ ತೆರಿಗೆಯನ್ನು ಈಗಾಗಲೇ ಪಾವತಿ ಮಾಡಿದ್ದರೂ ಡಿಸೆಂಬರ್ 31ನೇ ತಾರೀಕಿನೊಳಗೆ ಐಟಿಆರ್ ಫೈಲ್ ಮಾಡದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ.