ಬೆಂಗಳೂರು,ಡಿ.27- ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಉಳಿಸಿ ಹೋರಾಟ ಉಗ್ರರೂಪ ತಾಳುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡುವಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆ ಪಾಳ್ಯದಲ್ಲಿ ನಡೆದ ಕರವೇ ಸಭೆಯಲ್ಲಿ ಮಾತನಾಡಿದ ಅವರು, ಹಂಪಿ ಕನ್ನಡ ವಿವಿಗೆ ಅನುದಾನ ನೀಡುವುದು ಸೇರಿದಂತೆ ವಿಶ್ವವಿದ್ಯಾಲಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿದರು.
ಟ್ವಿಟರ್‍ನಲ್ಲಿ ಹಂಪಿ ಕನ್ನಡ ವಿವಿ ಉಳಿಸಿ ಎಂಬ ಅಭಿಯಾನಕ್ಕೆ ಈಗಾಗಲೇ 4,500 ಲಕ್ಷ ಮಂದಿ ಕೈ ಜೋಡಿಸಿದ್ದಾರೆ. ಇದರಲ್ಲಿ ಹಲವಾರು ಸಾಹಿತಿಗಳು, ಕಲಾವಿದರು, ಬುದ್ದಿಜೀವಿಗಳು, ಕನ್ನಡಪರ ಹೋರಾಟಗಾರರು ಒಳಗೊಂಡಿದ್ದಾರೆ.
ಕನ್ನಡಕ್ಕೆಂದು ಇರುವ ಏಕೈಕ ವಿವಿ ಇದು. ಇದಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದರು.