ಹಾಸನ: ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಪಿಡಿಓಗಳು 10 ಸಾವಿರ ಹಣ ನೀಡುವಂತೆ ದೊಡ್ಡಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ವಂತಿಕೆ ನೀಡಬೇಕು ಎಂದು ಪಿಡಿಓ -ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬಿಜೆಪಿಯವರು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂತಹ ಹಣ ವಸೂಲಿಗೆ ಇಳಿದಿದ್ದು ಕ್ಷೇತ್ರದ ಅಧಿಕಾರಿಗಳು ಬಂದು ನಮಗೆ ದೂರು ನೀಡಿದ್ದಾರೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಮುಖೇನ ದೂರು ಸಲ್ಲಿಸಲಾಗುವುದು ಎಂದು ರೇವಣ್ಣ ತಿಳಿಸಿದರು.
Laxmi News 24×7