ಬೆಂಗಳೂರು: ಬೆಳಗಾವಿ ಲೋಕಸಭೆ ಉಪಚುನಾವಣೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಹಲವು ಸಭೆಗಳು ನಡೆಯಲಿದ್ದು, ಯಾರಿಗೆ ಟಿಕೇಟ್ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಗೆ ಟಿಕೇಟ್ ನೀಡಲಾಗುವುದು. ಚುನಾವಣೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಗ್ರಾಪಂ ಸೇರಿದಂತೆ ಬೆಳಗಾವಿಯ ಲೋಕಸಭೆ ಉಪಸಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೋ ಹತ್ಯೆ, ಲವ್ ಜಿಹಾದ್ ಸೇರಿದಂತೆ ಇತರೆ ಕಾನೂನುಗಳನ್ನು ಜಾರಿ ಮಾಡುವ ಕುರಿತು ನಾನು ವೈಯಕ್ತಿಕ ಅಭ್ರಿಪಾಯವನ್ನು ವ್ಯಕ್ತಪಡಿಸಲು ಆಗುವುದಿಲ್ಲ ಇದು ಪಕ್ಷದ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಬಿಜೆಪಿ ಸರಕಾರ ಒಂದು ಸಮುದಾಯವನ್ನು ಗುರಿಯಾಗಿಸಿ ಲವ್ ಜಿಹಾದ್, ಗೋ ಹತ್ಯೆ ಕಾನೂನು ತರಲು ಹೊರಟಿರುವುದು ಖಂಡನೀಯವಾಗಿದೆ. ಒಂದು ಸಮುದಾವನ್ನು ಶೋಷಣೆಗೆ ಒಳಪಡಿಸಿ, ಅವರನ್ನು ದಬ್ಬಾಳಿಕೆ ಮಾಡುವುದೇ ಸರಕಾರದ ಗುರಿಯಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.