ಬೆಳಗಾವಿ: ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಪ್ರಮೋದ ಸಾವಂತ ಹೇಳಿಕೆ ವಿಚಾರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಗೋವಾ ಸಿಎಂ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕ ಕಾನೂನು ಬಾಹಿರವಾಗಿ ನೀರು ಪಡೆದಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಅವರಿಗೆ ಬಹಿರಂಗ ಆಹ್ವಾನ ಕೋಡುತ್ತೇನೆ. ಕಳಸಾ ನಾಲಾಗೆ ನಿರ್ಮಾಣವಾಗಿರೋ ಗೋಡೆ ಮುಟ್ಟಿಲ್ಲ. ಒಂದು ವೇಳೆ ಅವರು ಮಾಡಿದ ಆರೋಪ ಸಾಬೀತು ಆದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ ಕಾನೂನು ಬಾಹಿರವಾಗಿ ಯಾವುದೇ ಕೆಲಸವನ್ನು ಮಾಡಿಲ್ಲ. ಕರ್ನಾಟಕ ಸಿಎಂ, ಗೋವಾ ಸಿಎಂ ಮಾತುಕತೆ ಅವಶ್ಯಕತೆ ಇಲ್ಲ. ಕೋರ್ಟ್ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಗೋವಾ ಸಿಎಂ ವಿರುದ್ಧ ಗುಡುಗಿದ್ದಾರೆ.
ನಿನ್ನೆ ಸಾಂಬ್ರಾ ಜಿಪಂ.ಸದಸ್ಯ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ 43 ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗಿದ್ದಾರೆ. ಎಷ್ಟು ಜನ ರಾಜೀನಾಮೆ ಕೊಡುತ್ತಾರೋ ಗೊತ್ತಿಲ್ಲ. ಜಿಪಂ ಸದಸ್ಯ ಕೃಷ್ಣ ಅನಗೋಳ್ಕರ್ ರಾಜೀನಾಮೆ ಅವಶ್ಯಕತೆ ಇರಲಿಲ್ಲ. ಆದರೆ ಇಷ್ಟು ಬೇಗ ರಾಜೀನಾಮೆ ಯಾಕೆ ಕೊಟ್ಟರೋ ಗೊತ್ತಿಲ್ಲ ಎಂದು ಹೇಳಿದರು.