ಬೆಂಗಳೂರು, ನ.29-ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸನ್ನು ಸದೃಢಗೊಳಿಸುವುದೂ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ನಾಳೆ ಪಕ್ಷದ ಹಿರಿಯ ನಾಯಕರುಗಳ ಮಹತ್ವದ ಸಭೆ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್‍ಖಂಡ್ರೆ, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರುಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಪ್ರಸ್ತುತ ದಿನಗಳಲ್ಲಿ ಚುನಾವಣೆಗಳ ಸೋಲಿನಿಂದ ಕಾಂಗ್ರೆಸ್‍ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತರಲ್ಲಿ ನಿರುತ್ಸಾಹ ಇದೆ. ಮುಂದಿನ ದಿನಗಳಲ್ಲಿ ಗ್ರಾಮ , ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ಬಿಬಿಎಂಪಿ ಹಾಗೂ ಬಸವಕಲ್ಯಾಣ, ಮಸ್ಕಿಯ ವಿಧಾನಸಭೆ ಉಪ ಚುನಾವಣೆ, ಬೆಳಗಾವಿ ಲೋಕಸಭೆ ಉಪ ಚುನಾವಣೆಗಳು ಎದುರಾಗಲಿವೆ.
ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲೂ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರು. ಹಾಗಾಗಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಎದುರಿಸಿ ಮತ್ತೆ ಕಾಂಗ್ರೆಸನ್ನು ಗೆಲ್ಲಿಸಿಕೊಳ್ಳುವ ಸವಾಲು ಹಿರಿಯ ನಾಯಕರ ಮೇಲಿದೆ.
ಶಿರಾ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರಿಂದ ಭಾರೀ ಹಿನ್ನಡೆಯಾಗಿದೆ. ಈ ಸೇಡನ್ನು ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ತೀರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹವಣಿಸುತ್ತಿದ್ದಾರೆ.
ಈ ಹಿಂದಿನ ಉಪ ಚುನಾವಣೆಯಲ್ಲಾದ ತಪ್ಪನ್ನು ಮರುಕಳಿಸದಂತೆ ಎಚ್ಚರ ವಹಿಸಿ, ನಾಯಕರಲ್ಲಿ ಒಗ್ಗಟ್ಟು ಮೂಡಿಸಿ ಸಂಘಟಿತ ಹೋರಾಟದ ಮೂಲಕ ಚುನಾವಣೆ ಎದುರಿಸುವ ರಣತಂತ್ರ ರೂಪಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್‍ಗೆ ಪದೇ ಪದೇ ಎದುರೇಟು ನೀಡುತ್ತಲೇ ಇದ್ದು, ಇತ್ತೀಚೆಗೆ ವೀರೈಶವ ಲಿಂಗಾಯಿತ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ಬಿಜೆಪಿಯ ವೋಟ್‍ಬ್ಯಾಂಕನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯಾವ ತಂತ್ರ ಅನುಸರಿಸಬೇಕೆಂಬ ಗೊಂದಲವಿದೆ.
ಉತ್ತರ ಕರ್ನಾಟಕ ಭಾಗ ಬಿಜೆಪಿಗೆ ಭದ್ರ ನೆಲೆಯಾಗುತ್ತಿದೆ. ಕಾಂಗ್ರೆಸ್ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜತೆ ಸಂಘರ್ಷ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಡುವೆ ಹೋರಾಟ ಮಾಡುವ ಅನಿವಾರ್ಯತೆ ಇದೆ.
ಬಿಜೆಪಿ ಸರ್ಕಾರದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂಬ ವ್ಯಾಪಕ ಆರೋಪಗಳು ಕೇಳಿ ಬಂದಿವೆ. ಆದರೆ, ಅದನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಪ್ರತಿ ಪಕ್ಷ ಕಾಂಗ್ರೆಸ್ ವಿಫಲವಾಗಿದೆ.
ಕೊರೊನಾ ನಿರ್ವಹಣೆಯಲ್ಲಿನ ವೈಫಲ್ಯ, ನೆರೆ ಹಾವಳಿ ಸೇರಿದಂತೆ ಹಲವಾರು ಲೋಪಗಳ ಜತೆ ಕಾಂಗ್ರೆಸ್‍ನ ಹೋರಾಟ ಪರಿಣಾಮಕಾರಿಯಾಗಿಲ್ಲ ಎಂದು ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಹೊಸ ಆಲೋಚನೆ ಹೊಸ ತಂತ್ರಗಾರಿಕೆಗಳ ಮೂಲಕ ಪಕ್ಷವನ್ನು ಬಲಪಡಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಪ್ರಮುಖವಾಗಿ ಕಾಂಗ್ರೆಸ್‍ನ್ನು ನಾಯಕತ್ವದ ಆಧಾರಕ್ಕಿಂತ ಕೇಡರ್‍ಬೇಸ್ ಪಾರ್ಟಿಯನ್ನಾಗಿ ಬದಲಾಯಿಸುವ ನಿರ್ಧಾರವನ್ನು ಡಿ.ಕೆ.ಶಿವಕುಮಾರ್ ಮಾಡಿದ್ದಾರೆ.
ಈವರೆಗೂ ಹಿರಿಯ ನಾಯಕರ ಶಿಫಾರಸುಗಳನ್ನು ಆಧರಿಸಿ ಕಾರ್ಯಕರ್ತರು, ನಾಯಕರಿಗೆ ಸ್ಥಾನಮಾನ ಸಿಗುತ್ತಿದ್ದವು. ಇನ್ನು ಮುಂದೆ ಯಾವುದೇ ನಾಯಕರು ಅಕಾರ ಹಾಗೂ ಅವಕಾಶ ಪಡೆಯಬೇಕಾದರೆ ಬೂತ್‍ಮಟ್ಟದ ಸಮಿತಿಯ ಶಿಫಾರಸು ಕಡ್ಡಾಯ ಎಂಬ ನಿಯಮಾವಳಿ ಜಾರಿಗೆ ತರಲಾಗುತ್ತಿದೆ.
ಒಂದು ವೇಳೆ ಇದು ಜಾರಿಗೆ ಬಂದರೆ ಪಕ್ಷ ಪಕ್ಕಾ ಕೇಡರ್‍ಬೇಸ್ ಪಾರ್ಟಿಯಾಗಿ ಬೆಳೆಯಲಿದ್ದು, ಕೆಳ ಹಂತದ ನಾಯಕರಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಕಾಂಗ್ರೆಸ್ ಪಕ್ಷದ ನೆಲ ಗಟ್ಟಿಗೊಳ್ಳಲಿದೆ. ಈ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತೆ ಹಿರಿಯ ನಾಯಕರ ಜತೆ ಚರ್ಚಿಸಲು ನಾಳೆ ಮಹತ್ವದ ಸಭೆ ನಡೆಸಲಾಗುತ್ತಿದೆ.