ಬೆಂಗಳೂರು, ನ.24- ಕೋವಿಡ್ ಸಂಕಷ್ಟದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ವಾಹನಗಳ ಸಾಲ ಮನ್ನಾ ಮಾಡಬೇಕು. ಚಾಲಕರ ಪುನಶ್ಚೇತನಕ್ಕೆ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಡಿ ಸಾಲ ನೀಡುವುದು, ಖಾಸಗಿ ಲೇವಾದೇವಿದಾರರಿಂದಾಗುವ ಕಿರುಕುಳ ತಪ್ಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ (ಜೆಸಿಟಿಯು) ನ.26ರಂದು ನಗರದಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಿದೆ.
ಈ ಸಂಬಂಧ ಇಂದು ಪತ್ರಿಕಾಗೋಷ್ಠಿ ನಡೆಸಿದ ಜೆಸಿಟಿಯು ಸಂಚಾಲಕ ಬಿ.ವಿ.ರಾಘವೇಂದ್ರ ಅವರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯುತ್ತಿದ್ದು, ಅಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದು, ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.