Breaking News
Home / Uncategorized / ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ

ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ

Spread the love

ಬೆಂಗಳೂರು, ನ.14- ಮಾಸ್ಕ್ ಇಲ್ಲ… ಸಾಮಾಜಿಕ ಅಂತರ ಇಲ್ಲ… ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ… ನಗರದ ಕೆಆರ್ ಮಾರುಕಟ್ಟೆ, ಶಿವಾಜಿನಗರ, ಮಲ್ಲೇಶ್ವರಂ, ಯಶವಂತಪುರ ಮುಂತಾದೆಡೆ ಹಬ್ಬದ ಸಾಮಾನುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು.

ಹೂವು, ಹಣ್ಣು, ಬಾಳೆಕಂದು, ದೀಪ, ಹೊಸ ಬಟ್ಟೆಗಳನ್ನು ಖರೀದಿಸಲು ಜನ ನಾ ಮುಂದು ತಾ ಮುಂದು ಎಂದು ಮಾರುಕಟ್ಟೆಗಳು, ಅಂಗಡಿಗಳು, ಶಾಪ್‍ಗಳಿಗೆ ಲಗ್ಗೆ ಇಟ್ಟರು. ಕೊರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂತು. ಕಾಟಾಚಾರಕ್ಕೆ ಕೆಲವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರೆ, ಮತ್ತೆ ಕೆಲವರು ಮಾಸ್ಕ್‍ಗಳನ್ನು ಧರಿಸಿಯೇ ಇರಲಿಲ್ಲ. ಇನ್ನೂ ಕೆಲವರ ಮಾಸ್ಕ್‍ಗಳು ಕೊರಳಲ್ಲಿ ನೇತಾಡುತ್ತಿದ್ದವು. ಸಾಮಾಜಿಕ ಅಂತರವಂತೂ ಇರಲೇ ಇಲ್ಲ.

ಬೆಳ್ಳಂಬೆಳಗ್ಗೆ ಕೆಆರ್ ಮಾರುಕಟ್ಟೆಯಲ್ಲಿ ಹಣ್ಣು, ಹೂವು, ಬಾಳೆಕಂದು ಮತ್ತಿತರ ಹಬ್ಬದ ಪದಾರ್ಥಗಳನ್ನು ಕೊಳ್ಳುವಲ್ಲಿ ನಿರತರಾಗಿದ್ದ ಜನಕ್ಕೆ ಕೊರೊನಾ ಸೋಂಕಿನ ಭಯವೇ ಇರಲಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಕೇಳುವಂತೆಯೇ ಇಲ್ಲ. ರಾಶಿ ರಾಶಿ ಹೂವುಗಳು, ಹಣ್ಣುಗಳನ್ನು ಹಾಕಿಕೊಂಡಿದ್ದ ವರ್ತಕರ ಮುಂದೆ ನೂರಾರು ಜನ ಸೇರಿ ತಮಗೆ ಬೇಕಾದಷ್ಟು ಹಣ್ಣು, ಹೂವುಗಳ ಖರೀದಿಯಲ್ಲಿ ತೊಡಗಿದ್ದರಷ್ಟೇ ಹೊರತು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಂತೂ ಕಂಡುಬರಲಿಲ್ಲ.

ಇತ್ತ ಯಶವಂತಪುರ, ಮಲ್ಲೇಶ್ವರಂ, ಎಪಿಎಂಸಿ ಮಾರುಕಟ್ಟೆಗಳಲ್ಲೂ ಇದೇ ದೃಶ್ಯಗಳು ಕಂಡುಬಂದವು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಹೇಳುವ ಬಿಬಿಎಂಪಿ, ಸರ್ಕಾರ ಅದಕ್ಕಾಗಿ ಮಾರ್ಷಲ್‍ಗಳನ್ನು ನೇಮಿಸಿದೆ. ಮಾರುಕಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಖರೀದಿಯಲ್ಲಿ ನಿರತರಾಗಿದ್ದರೂ ಮಾರ್ಷಲ್‍ಗಳು ಮಾತ್ರ ಇತ್ತ ತಲೆ ಹಾಕಿದಂತೆ ಕಂಡುಬರಲಿಲ್ಲ.ನಗರದ ಕೆಲವೇ ಕೆಲವು ಸ್ಥಳಗಳಲ್ಲಿ ನಿಂತು ದಂಡ ವಿಧಿಸುವ ಕಾಯಕದಲ್ಲಿ ಅವರು ತೊಡಗಿದ್ದರು. ಮಾಮೂಲಿ ದಿನಗಳಲ್ಲಿ ಮೂಗಿನಿಂದ ಸ್ವಲ್ಪ ಮಾಸ್ಕ್ ಕೆಳ ಜಾರಿದರೆ ಸಾಕು, ಫೋಟೋ ತೆಗೆದು ದಂಡ ವಿಧಿಸುವ ಮಾರ್ಷಲ್‍ಗಳು ಇಂದು ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ