ಪಣಜಿ: ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿಯ ಬಗ್ಗೆ ಅರಿವು ಮುಡಿಸುವ ಪ್ರೊಫೆಸರ್ ಒಬ್ಬರು ಮಹಿಳೆಯರ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿ ವಿವಾದಕ್ಕೀಡಾದ ಘಟನೆ ಗೋವಾದಲ್ಲಿ ನಡೆದಿದೆ.
ಶಿಲ್ಪಾ ಸಿಂಗ್ ವಿವಾದಕ್ಕೀಡಾದ ಪ್ರೊಫೆಸರ್ ಆಗಿದ್ದು, ಸದ್ಯ ಇವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ರಾಷ್ಟ್ರೀಯ ಹಿಂದೂ ಯುವ ವಾಹಿನಿ ಗೋವಾ ಘಟಕದ ರಾಜೀವ್ ಝಾ ಎಂಬವರು ಪ್ರೊಫೆಸರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಝಾ ಅವರು ತಮ್ಮ ದೂರಿನಲ್ಲಿ ಸಿಂಗ್ ಅವರ ಫೇಸ್ ಬುಕ್ ಪೋಸ್ಟ್ ಅನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಟೀಕಿಸಿದ್ದರು. ಕ್ರಮವಾಗಿ ಮಂಗಳಸೂತ್ರವನ್ನು ಧರಿಸುವ ಮತ್ತು ಬುರ್ಖಾ ಧರಿಸುವ ಅಭ್ಯಾಸವನ್ನು ಕೂಡ ಉಲ್ಲೇಖಿಸಿದ್ದಾರೆ. ಇದೇ ವೇಳೆ ಮಹಿಳೆಯರು ಧರಿಸುವ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿದ್ದಾರೆ. ಸದ್ಯ ಇವರ ಪೋಸ್ಟ್ ಗೆ ಎಲ್ಲೆಡೆಯಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಶಿಲ್ಪಾ ಸುರೇಂದ್ರ ಪ್ರತಾಪ್ ಸಿಂಗ್ ಎಂಬ ಫೇಸ್ ಬುಕ್ ಅಕೌಂಟಿನಿಂದ ಭಾರತೀಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ಧಾರ್ಮಿಕ ಭಾವನೆಗಳಿಗೆ ಅವಮಾನ ಉಂಟುಮಾಡಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪಣಜಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಇಷ್ಟಾದರೂ ಪ್ರೊಫೆಸರ್ ಈ ಬಗ್ಗೆ ಸಮರ್ಥಿಸಿಕೊಂಡಿದ್ದು, ತನ್ನ ವಿರುದ್ಧ ದೂರಿಗೆ ಪ್ರತಿಯಾಗಿ ತಾವೂ ಝಾ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಲ್ಲದೆ ಆ ಬಳಿಕ ಆಕೆಗೆ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ ಎಂಬುದಾಗಿ ವರದಿಯಾಗಿದೆ.
Laxmi News 24×7