ಬಾಗಲಕೋಟೆ: ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷೆ ಆಕಾಂಕ್ಷಿಯಾಗಿ ಮಹಿಳೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿರುವ ಘಟನೆ ನಡೆದಿದೆ. ಶಾಸಕರ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿದೆ.
ಮಹಲಿಂಗಪುರ ಪುರಸಭೆ ಅಧ್ಯಕ್ಷೆ ಗಾದಿ ವಿಚಾರವಾಗಿ ಗಲಾಟೆ ನಡೆದಿದ್ದು, ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾಗಿರುವ ಸವಿತಾ ಹುರಕಡ್ಲಿ ಎಂಬ ಮಹಿಳೆಯೊಂದಿಗೆ ಶಾಸಕ ಸವದಿ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ನೆಲಕ್ಕೆ ನೂಕಿರುವ ವಿಡಿಯೋ ವೈರಲ್ ಆಗಿದೆ.
ಮಹಾಲಿಂಗಪುರ ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 10, ಬಿಜೆಪಿ 13 ಸ್ಥಾನ ಹೊಂದಿದೆ. ನ.9ರಂದು ಸಂಜೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ಅವಕಾಶ ಸಿಗದಕ್ಕೆ ಬೇಸತ್ತು, ಕಾಂಗ್ರೆಸ್ ಸದಸ್ಯರೊಂದಿಗೆ ಗುರುತಿಸಿಕೊಂಡಿದ್ದರು. ಬಿಜೆಪಿಯ ಸದಸ್ಯರಾದ ಗೋದಾವರಿ ಬಾಟ, ಚಾಂದಿನಿ ನಾಯಕ ಹಾಗೂ ಸವಿತಾ ಹುರಕಡ್ಲಿ ಅವರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡು, ಸವಿತಾ ಹುರಕಡ್ಲಿ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ ಗೋದಾವರಿ ಬಾಟ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು.
ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
ಘಟನೆಯಲ್ಲಿ ಮೂವರು ಮಹಿಳೆಯನ್ನು ಎಳೆದಾಡಲಾಗಿದೆ. ನಮ್ಮ ತಂದೆ ತಾಯಿ 20 ವರ್ಷದಿಂದ ರಾಜಕೀಯದಲ್ಲಿದ್ದಾರೆ. ಒಂದು ಬಾರಿಯೂ ಅಧ್ಯಕ್ಷ ಸ್ಥಾನ ನೀಡಿಲ್ಲ. ಅಧ್ಯಕ್ಷ ಸ್ಥಾನ ವಿಚಾರವಾಗಿ ಶಾಸಕ ಸಿದ್ದು ಸವದಿ ನಮ್ಮ ತಾಯಿಯನ್ನು ನೂಕಿದ್ದಾರೆ. ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಸೌಜನ್ಯಕ್ಕೂ ಶಾಸಕರು ಮಾತನಾಡಿಸಿಲ್ಲ ಅಂತಾ ಸವಿತಾ ಹುರಕಡ್ಲಿ ಅವರ ಪುತ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.