ಮೈಸೂರು: ನಗರಕ್ಕೆ ಆಗಮಿಸಿದ ತಕ್ಷಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ.
ಇಂದು ಮೈಸೂರು ಪ್ರವಾಸಕ್ಕೆ ಆಗಮಿಸಿರುವ ಅವರು, ಎಲ್ಲರೂ ನನ್ನಿಂದ ದೂರ ಇರಿ, 6 ಅಡಿ ದೂರ ನಿಂತುಕೊಳ್ಳಿ. ನನ್ನ ಅಕ್ಕ ಪಕ್ಕ ನಿಂತುಕೊಂಡರೂ ನಾನು ಬರುವುದಿಲ್ಲ ಎಂದು ತಮ್ಮ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತರನ್ನು ದೂರ ಸರಿಸಿದ್ದಾರೆ. ಯಾರೂ ಹತ್ತಿರ ಬಾರದಂತೆ ತಡೆದಿದ್ದಾರೆ. ಈ ಮೂಲಕ ತಮ್ಮ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ.
ರಾಜಕಾರಣಿಗಳ ಜೊತೆಗೆ ಕಾರ್ಯಕರ್ತರು ನಿಲ್ಲುವುದು ಸಾಮಾನ್ಯ, ಅದೇ ರೀತಿ ಈಗಲೂ ಕಾರ್ಯಕರ್ತರು ಕೊರೊನಾ ಲೆಕ್ಕಿಸದೇ ಹತ್ತಿರ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ. ಸಾಮಾಜಿಕ ಅಂತರ ಕಾಪಾಡುವಂತೆ ಎಚ್ಚರಿಸಿದ್ದಾರೆ. ನೀವು ನನ್ನ ಹತ್ತಿರ ನಿಂತರೆ ಮಾಧ್ಯಮಗಳ ಜೊತೆಗೂ ಮಾತನಾಡುವುದಿಲ್ಲ ಎಂದು ತಮ್ಮ ಪಕ್ಕ ಗುಂಪಾಗಿ ನಿಂತಿದ್ದ ಕಾರ್ಯಕರ್ತರನ್ನು ದೂರ ಸರಿಸಿದ್ದಾರೆ. ಕೊರೊನಾ ಕುರಿತು ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸುವ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದು ನಿಜ. ದೆಹಲಿಯ ಮಾಹಿತಿ ಆಧರಿಸಿ ಹೇಳುತ್ತಿದ್ದೇನೆ. ಯಡಿಯೂರಪ್ಪ ಬದಲಾಗುತ್ತಾರೆ, ಮತ್ತೆ ಸಿಎಂ ಯಾರಾಗುತ್ತಾರೆ ಎಂಬುದು ತಿಳಿದಿಲ್ಲ. ಸಿಎಂ ಬದಲಾವಣೆ ಕುರಿತು ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ, ಇದೀಗ ಬಲಗೊಂಡಿದೆ. ಸಿಎಂ ಬದಲಾವಣೆಗೆ ಭ್ರಷ್ಟಾಚಾರ ಸಹ ಕಾರಣ ಎಂದು ತಿಳಿಸಿದರು.
ಆರ್‍ಆರ್ ನಗರ ಹಾಗೂ ಶಿರಾ ಎರಡೂ ಉಪಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಪರ ಮತಗಳೇ ನಮ್ಮನ್ನು ಗೆಲ್ಲಿಸುತ್ತವೆ. ಕಳೆದ ಬಾರಿ ಅಪಪ್ರಚಾರದಿಂದ ನಮ್ಮ ಅಭ್ಯರ್ಥಿ ಸೋತಿದ್ದರು. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಇವಿಎಂ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ, ಸಮಸ್ಯೆ ಇದ್ದೇ ಇದೆ. ಇದೆಲ್ಲದರ ಮಧ್ಯೆಯೂ ನಾವು ಗೆಲ್ಲುತ್ತೇವೆ. ಅವರು ಹಣ ಹೆಚ್ಚು ಖರ್ಚು ಮಾಡಿದ್ದೇವೆ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ. ಆದರೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.