ಮೈಸೂರು: ದಸರಾ ಸರಳ ಆಚರಣೆಯ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ದಸರಾಗೆ ಪ್ರವಾಸಿತಾಣಗಳನ್ನು ಓಪನ್ ಮಾಡಿರುವ ಪರಿಣಾವನ್ನು ನಾವು ಎದುರಿಸಲೇಬೇಕು. ಆದ್ದರಿಂದ ಇದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಇನ್ನು 15 ದಿನದ ನಂತರ ನಾವು ಮತ್ತಷ್ಟು ಹೆಚ್ಚಿನ ಪ್ರಕರಣಗಳು ನಿರೀಕ್ಷಿಸಿದ್ದೇವೆ. ಆದ್ದರಿಂದ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಜಿಲ್ಲಾಡಳಿತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಲಾಗಿತ್ತು. ಈಗ ಯಾವುದೇ ಬೆಡ್ ಸಮಸ್ಯೆ ಇಲ್ಲ. ಆಕ್ಸಿಜನ್ ಹಾಗೂ ಟೆಸ್ಟಿಂಗ್ ನಲ್ಲೂ ಯಾವುದೇ ಕೊರತೆ ಇಲ್ಲ. ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ 50 ಬೆಡ್, ಆಕ್ಸಿಜನ್ ಬೆಡ್, ಐಸಿಯುಗಳು ಲಭ್ಯವಿದೆ ಎಂದು ಹೇಳಿದರು. ಮೊದಲು ಕೊರೊನಾವನ್ನು ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಆದರೆ ಆ ಬಳಿಕ ಕೆಲ ಕಾರಣಗಳಿಂದ ಸೋಂಕು ಹೆಚ್ಚಾಗಿತ್ತು. ಈಗ ನಾವು ಮತ್ತೆ ಎಲ್ಲವನ್ನು ಹಿಡಿತಕ್ಕೆ ತಂದಿದ್ದೇವೆ. ಈಗ ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಮುಂದಿನ 10 ಮತ್ತು 20 ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಜನರಿಗೆ ಬರಬೇಡಿ ಎಂದು ಹೇಳಲು ಆಗುವುದಿಲ್ಲ. ಈಗ ಮೈಸೂರಿನ ಎಲ್ಲಾ ಹೋಟೆಲ್, ರೆಸಾರ್ಟ್ ಗಳು ತುಂಬಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಎಲ್ಲೋ ಒಂದು ಸ್ಥಳದಲ್ಲಿ ಕೊರೊನಾ ಟೆಸ್ಟ್ ನಡೆಯಬೇಕು ಎಂಬುವುದು ನಮ್ಮ ಉದ್ದೇಶ. ಆದ್ದರಿಂದ ಮೃಗಾಲಯ ಮತ್ತು ಬೆಟ್ಟದ ಮೇಲೆ ಕೊರೊನಾ ಟೆಸ್ಟ್ ನಡೆಸುವಷ್ಟು ಸ್ಥಳಾವಕಾಶ ಲಭ್ಯವಾಗದ ಕಾರಣ ಅರಮನೆ ಆವರಣದಲ್ಲಿ ಸ್ಕ್ರೀನಿಂಗ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.