ನವದೆಹಲಿ: ಅನ್‌ಲಾಕ್ 5ರ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಆರು ದಿನಗಳ ಹಿಂದೆಯೇ ಹೇಳಿತ್ತು. ಈಗ ಗೃಹ ಸಚಿವಾಲಯ ಶಾಲೆಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪೋಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ತೆರಳಬಹುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್‍ಲೈನ್ ತರಗತಿಗಳನ್ನು ಆಯ್ಕೆಯಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಶಾಲಾ ಕೊಠಡಿಗಳನ್ನು ನಿತ್ಯವೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲಾ ಸಂದರ್ಭಗಳಲ್ಲಿಯೂ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಮಾಸ್ಕ್ ಧರಿಸಬೇಕು. ಶಿಕ್ಷಕರು, ಮಕ್ಕಳು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ.
ತುರ್ತು ಅಗತ್ಯಕ್ಕೆ ಸ್ಪಂದಿಸಲು ಟಾಸ್ಕ್ ಟೀಂ ರಚಿಸಬೇಕು. ಕಾರ್ಯಕ್ರಮಗಳು, ಕ್ರೀಡೆಗಳನ್ನು ಆಯೋಜಿಸಬಾರದು. ಪಾಠ, ಪರೀಕ್ಷೆ, ರಜೆಗೆ ಸಂಬಂಧಿಸಿದಂತೆ ಬದಲಾದ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಅನುಸರಿಸಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಠಿಕಾಂಶ ಇರುವ ಆಹಾರ ನೀಡಬೇಕು.