Breaking News

ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ

Spread the love

ಬೆಳಗಾವಿ: ಬೆಳಗಾವಿ- ಕಿತ್ತೂರು-ಧಾರವಾಡ ನಡುವೆ ರೈಲು ಮಾರ್ಗ ನಿರ್ಮಿಸಲು ₹927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಈಚೆಗೆ ತಿಳಿಸಿ, ಈ ಭಾಗಕ್ಕೆ ದೊಡ್ಡ ಕೊಡುಗೆ ತಂದಿರುವುದಾಗಿ ಹರ್ಷ ವ್ಯಕ್ತಪಪಡಿಸಿದ್ದರು.

’73 ಕಿ.ಮೀ. ಉದ್ದದ ಈ ಯೋಜನೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಬೆಳಗಾವಿ, ದೇಸೂರು, ಕಣವಿಕರವಿನಕೊಪ್ಪ, ಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ ಮೂಲಕ ಧಾರವಾಡಕ್ಕೆ ಸಂಪರ್ಕ ಕಲ್ಪಿಸಲಿದೆ’ಎಂದು ಮಾಹಿತಿ ನೀಡಿದ್ದರು.

‘ಯೋಜನೆ ಅನುಷ್ಠಾನಗೊಂಡಲ್ಲಿ ಪ್ರಮುಖ ನಗರಗಳಾದ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಗೆ ಸುಗಮ ಮತ್ತು ಕಡಿಮೆ ಸಮಯದಲ್ಲಿ ಸಂಪರ್ಕ ಸಾಧ್ಯವಾಗಲಿದೆ.

ರೈಲಿನಲ್ಲಿ ಸುತ್ತಿ ಬಳಸಿ ಧಾರವಾಡ ತಲುಪುವುದು ತಪ್ಪಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳ್ಳಲಿರುವ ಬೆಳಗಾವಿ-ಕಿತ್ತೂರು-ಧಾರವಾಡ ಕೈಗಾರಿಕಾ ಕಾರಿಡಾರ್‌ ಬೆಳವಣಿಗೆಗೂ ಸಹಕಾರಿಯಾಗಲಿದೆ’ ಎಂದು ತಿಳಿಸಿ ಹೆಮ್ಮೆ ವ್ಯಕ್ತಪಡಿಸಿದ್ದರು.

‘2013-14ರಲ್ಲಿ ಮಾರ್ಗದ ಸಮೀಕ್ಷೆ ನಡೆದಿತ್ತಾದರೂ ಆಗ ಪ್ರಸ್ತಾವಕ್ಕೆ ಅನುಮೋದನೆ ದೊರೆತಿರಲಿಲ್ಲ. ಹೀಗಾಗಿ, ಹೊಸದಾಗಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಕೇವಲ 2 ವರ್ಷಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ’ ಎಂದು ಖುಷಿ ಹಂಚಿಕೊಂಡಿದ್ದರು. ಇದು ಅವರು ಬೆಳಗಾವಿಯಲ್ಲಿ ನಡೆಸಿದ ಕೊನೆಯ ಅಧಿಕೃತ ಪತ್ರಿಕಾಗೋಷ್ಠಿಯಾಗಿ ಹೋಯಿತು.

‘ಸ್ವಾತಂತ್ರ್ಯ ಬಂದ ನಂತರ ಬೆಳಗಾವಿಯಲ್ಲಿ ಇದೇ ಮೊದಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ’.

– ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿದ್ದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಹೀಗೆ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದ ಸಂಸದ ಸುರೇಶ ಅಂಗಡಿ ಅವರು, ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಹಲವು ಯೋಜನೆಗಳನ್ನು ಈ ಭಾಗಕ್ಕೆ ತಂದಿದ್ದರು.

ಇಲ್ಲಿ ಎರಡು ರೈಲ್ವೆ ಮೇಲ್ಸೇತುವೆ, ಹೊಸ ರೈಲು ಮಾರ್ಗಗಳಿಗೆ ಶ್ರೀಕಾರ ಹಾಕಿದವರು. ಬೆಂಗಳೂರು-ಬೆಳಗಾವಿಗೆ ಹೊಸ ರೈಲು ತಂದಿದ್ದರು. ಬೆಳಗಾವಿಯು ಕೇಂದ್ರದ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗುವುದರಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ರಫ್ತು ಚಟುವಟಿಕೆಗಳು ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲೆಂದು ಡಿಜಿಎಫ್‌ಟಿ (ರಫ್ತು ನಿರ್ದೇಶನಾಲಯ) ಕಚೇರಿ ಸ್ಥಾಪನೆಗೆ ಕಾರಣವಾಗಿದ್ದರು.

ಹೋದ ಚುನಾವಣೆಯಿಂದೀಚೆಗೆ ಅವರು ಸಾಮಾಜಿಕ ಜಾಲತಾಣ ಬಳಕೆಯಲ್ಲೂ ಮುಂದಿದ್ದರು. ಪ್ರಚಲಿತ ವಿದ್ಯಮಾನಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು.

ರೈಲ್ವೆ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ:

* ಬೆಳಗಾವಿ- ಬೆಂಗಳೂರು ಸೂಪರ್‌ಫಾಸ್ಟ್‌ ರೈಲು
* ಬೆಳಗಾವಿ- ಕಿತ್ತೂರು- ಧಾರವಾಡ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ
* ಬಾಗಲಕೋಟೆ- ಕುಡಚಿ ರೈಲು ಮಾರ್ಗ ಕಾಮಗಾರಿಗೆ ಹೆಚ್ಚಿನ ಒತ್ತು
* ಕಿಸಾನ್‌ ರೈಲು ಆರಂಭ
* ವಿಜಯಪುರ- ಮಂಗಳೂರು ರೈಲು


Spread the love

About Laxminews 24x7

Check Also

ಬೆಳಗಾವಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ; ಶಾಂತಿ ಮತ್ತು ನಮ್ರತೆಯ ಸಂದೇಶ ನೀಡಿದ ಬಿಷಪ್ ಡೆರೆಕ್ ಫೆರ್ನಾಂಡಿಸ್

Spread the love ಬೆಳಗಾವಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ; ಶಾಂತಿ ಮತ್ತು ನಮ್ರತೆಯ ಸಂದೇಶ ನೀಡಿದ ಬಿಷಪ್ ಡೆರೆಕ್ ಫೆರ್ನಾಂಡಿಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ