ಬೆಂಗಳೂರು: ರಾಜ್ಯದ ಹಲವೆಡೆ ಇಂದು ವರುಣ ಅಬ್ಬರಿಸಿದ್ದು, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಮಳೆ ನೀರಿನ ರಭಸಕ್ಕೆ ಯುವಕ ಕೊಚ್ಚಿಹೋಗಿದ್ದು, ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ್ದಿದ್ದು, ಅಫಜಲಪುರ್, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ.
ಅಲ್ಲದೆ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಮೃತ ಯುವಕ ಸಿದ್ದರಾಜು ಅಫಜಲಪುರ ಜೆಸ್ಕಾಂನಲ್ಲಿ ಎಇಇ ಆಗಿದ್ದ. ಯಳಸಂಗಿ ಗ್ರಾಮದಲ್ಲಿರುವ ತಾಯಿಯನ್ನು ಮಾತನಾಡಿಸಿ ಹಿಂದಿರುಗುವಾಗ ಘಟನೆ ಸಂಭವಿಸಿದೆ.
ಜಿಲ್ಲೆಯ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಅಪಾರ ಪ್ರಮಾಣದ ಆಹಾರ ಧಾನ್ಯ ನಾಶವಾಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸಹ ಸಂಪೂರ್ಣ ಜಲಾವೃತವಾಗಿದೆ. ಅತ್ತ ಕಾಗಿಣಾ ನದಿ ತುಂಬಿ ಹರಿಯುತ್ತಿರುವುದರಿಂದ ಕಲಬುರಗಿ- ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ. ಮಳಖೇಡ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸತತ 36 ಗಂಟೆಯಿಂದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಕಲಬುರಗಿಯ ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಮುಂಜಾಗೃತ ಕ್ರಮವಾಗಿ ದೇವಸ್ಥಾನದ ಮುಖ್ಯದ್ವಾರ ಬಂದ್ ಮಾಡಲಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಮಧ್ಯೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿ ಯುವಕರಿಬ್ಬರು ಹುಚ್ಚಾಟ ಮೆರೆದಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಜೂಜು ಕಟ್ಟಿ ನದಿಗೆ ಹಾರಿದ್ದಾರೆ.
Laxmi News 24×7