ಡಿಜಿಟಲ್‌ಡೆಸ್ಕ್: ಯಾವುದೇ ತರಹದ ರೋಗ ಮತ್ತು ಕೀಟಬಾಧೆ ಕಂಡುಬಂದಲ್ಲಿ ರೈತರ ಹೊಲಗಳಿಗೆ ಹೋಗಿ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ, ನೆರವು ನೀಡಲು 108 ವಾಹನ ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಕೃಷಿಕರು ಕರೆ ಮಾಡಿದ ಕೂಡಲೆ ಕೃಷಿ ಪದವೀಧರರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಈ ವಾಹನ ಹೊಲಗಳಿಗೆ ಹೋಗಿ ಸೂಕ್ತ ಸಲಹೆ ನೀಡಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ. ಅಲ್ಲಿ ಯಶಸ್ವಿಯಾದಲ್ಲಿ ರಾಜ್ಯಾದ್ಯಾಂತ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
ತೊಗರಿ ಮಂಡಳಿ ಬಲವರ್ಧನೆ: ಕಲಬುರಗಿಯಲ್ಲಿರುವ ತೊಗರಿ ಅಭಿವೃದ್ಧಿ ಮಂಡಳಿಯನ್ನು ಬಲವರ್ಧನೆಗೆ ಚಿಂತನೆ ನಡೆದಿದ್ದು, ಆರಂಭಿಕವಾಗಿ 1.5 ಕೋಟಿ ರೂ. ವೆಚ್ಚದಲ್ಲಿ ಮಂಡಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ತೊಗರಿ ಅಭಿವೃದ್ಧಿ ಮಂಡಳೀಯ ಅಧ್ಯಕ್ಷರಾಗಿರುವ ಸಚಿವ ಬಿ.ಸಿ.ಪಾಟೀಲ ಹೇಳಿದರು.
ರೈತ ಮಕ್ಕಳ ಕೋಟಾಗೆ ಧಕ್ಕೆಯಿಲ್ಲ: ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಾ ವಿದ್ಯಾಲಯಗಳಲ್ಲಿ ಕೃಷಿ ಪದವಿ ಪ್ರವೇಶಾತಿಯಲ್ಲಿ ಈ ಹಿಂದೆ ಇದ್ದಂತೆ ಶೇ.40ರಷ್ಟು ಸ್ಥಾನಗಳನ್ನು ರೈತರ ಮಕ್ಕಳಿಗೆ ಮೀಸಲಾತಿ ಇದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರ ಗುರುತಿಗಾಗಿ ‘ಸ್ವಾಭಿಮಾನಿ ರೈತ’ ಹೆಸರಿನಲ್ಲಿ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.
Laxmi News 24×7