ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಸಂಬಂಧ ಅಧ್ಯಯನಕ್ಕಾಗಿ ಕೇಂದ್ರದ ಅಧಿಕಾರಿಗಳ ತಂಡ ಸೋಮವಾರ ರಾಜ್ಯಕ್ಕೆ ಆಗಮಿಸಲಿದೆ.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್ ಅವರ ನೇತೃತ್ವದ ಎನ್‌ಡಿಆರ್‌ಎಫ್ ತಂಡ ಎರಡು-ಮೂರು ದಿನಗಳ ಕಾಲ ರಾಜ್ಯದಲ್ಲೇ ಉಳಿದುಕೊಂಡು ನೆರೆಯಿಂದ ಉಂಟಾದ ಹಾನಿ ಬಗ್ಗೆ ಅಧ್ಯಯನ ನಡೆಸುವ ಸಾಧ್ಯತೆ ಇದೆ.
ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳು ಭೇಟಿಯಾಗಲಿದ್ದಾರೆ. ಈ ವೇಳೆ ನೆರೆ ಹಾನಿ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಕರ್ನಾಟಕ, ಕರಾವಳಿಯ ಜನರು ನಿರಾಳ …
ಸಭೆಯ ಬಳಿಕ ಮಂಗಳವಾರದಿಂದ ಎರಡು ತಂಡಗಳಾಗಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪರಿಸ್ಥಿತಿ ಕುರಿತು ಸ್ಥಳೀಯರು ಮತ್ತು ಜಿಲ್ಲಾಡಳಿತ ಜೊತೆಗೆ ಚರ್ಚೆ ನಡೆಸಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ನಷ್ಟ, ಬೆಳೆ ಹಾನಿ, ಜೀವ ಹಾನಿ ಹಾಗೂ ಜಾನುವಾರು ಸಾವುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.