ಶಿವಮೊಗ್ಗ: ಫೈರಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಕ್ಸಲ್ ಶೋಭಾಳನ್ನು ಜಿಲ್ಲೆಯ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಇಂದು ಹಾಜರು ಪಡಿಸಲಾಗಿದೆ.
2012ರಲ್ಲಿ ಬರ್ಕಣ ಫಾಲ್ಸ್ ಬಳಿ ನಡೆದಿದ್ದ ಫೈರಿಂಗ್ ಪ್ರಕರಣದಲ್ಲಿ ನಕ್ಸಲ್ ಶೋಭಾ ಭಾಗಿಯಾಗಿದ್ದಳು ಎಂದು ದೂರು ದಾಖಲಿಸಲಾಗಿತ್ತು. ಫೈರಿಂಗ್ ಪ್ರಕರಣದ ನಂತರ ಶೋಭಾ ತಲೆ ಮರೆಸಿಕೊಂಡಿದ್ದಳು. ಕಳೆದ ಮಾರ್ಚ್‍ನಲ್ಲಿ ಶೋಭಾಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು.
ಶೋಭಾ 11 ನಕ್ಸಲ್ ಪ್ರಕರಣಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪವಿದ್ದು, ಇವಳ ವಿರುದ್ಧ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಶೋಭಾ ಮೂಲತಃ ಹೊಸನಗರ ತಾಲೂಕಿನ ಮೇಲುಸಂಕದವಳು.
ಸದ್ಯ ಶೋಭಾಳನ್ನು ತಮಿಳುನಾಡಿನ ಕೊಯಮತ್ತೂರು ಜೈಲಿನಲ್ಲಿ ಬಂಧನದಲ್ಲಿಡಲಾಗಿದೆ. ಇಂದು ವಿಚಾರಣೆ ಇದ್ದಿದ್ದರಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಕ್ಸಲ್ ಶೋಭಾ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಎಎನ್‍ಎಫ್ ತಂಡ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.