ಬೆಂಗಳೂರು, – ರನ್ನ, ಮುಕುಂದ ಮುರಾರಿ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಕಿಚ್ಚ ಸುದೀಪ್ ಹಾಗೂ ಡಿಂಪಲ್‍ಕ್ವೀನ್ ರಚಿತಾರಾಮ್ ಮುಂಬರುವ ಐಪಿಎಲ್‍ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ತಂಡದ ರಾಯಭಾರಿಯಾಗುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ.
ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ರಲ್ಲಿ ಆರ್‍ಸಿಬಿ ತಂಡಕ್ಕೆ ಕಿಚ್ಚ ಸುದೀಪ್ ಹಾಗೂ ರಚಿತಾರಾಮ್ ತಂಡದ ರಾಯಭಾರಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಕೂಡ ಇದರ ಬಗ್ಗೆ ಆರ್‍ಸಿಬಿ ತಂಡದ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ.
ಕ್ರಿಕೆಟ್ ಪ್ರಿಯರಾಗಿರುವ ಸುದೀಪ್ ಆರ್‍ಸಿಬಿ ತಂಡದ ರಾಯ ಭಾರಿ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿದೆ.ಐಪಿಎಲ್ ಆವೃತ್ತಿ ಆರಂಭವಾದಾಗಿ ನಿಂದಲೂ ಆರ್‍ಸಿಬಿ ತಂಡಕ್ಕೆ ದೀಪಿಕಾ ಪಡುಕೋಣೆ, ಕತ್ರೀನಾಕೇಫ್, ಪುನೀತ್‍ರಾಜ್‍ಕುಮಾರ್, ಉಪೇಂದ್ರ ಅವರು ತಂಡದ ರಾಯಭಾರಿ ಯಾಗಿದ್ದರು.
ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಕೂಡ ಒಂದು ಆವೃತ್ತಿಯಲ್ಲಿ ತಂಡದ ರಾಯಭಾರಿಯಾಗಿ ತಂಡಕ್ಕೆ ಜೋಶ್ ತುಂಬಿದ್ದರು. ಆ್ಯಕ್ಟರ್ ಆಗದಿದ್ದರೆ ನಾನು ಕ್ರಿಕೆಟರ್ ಆಗುತ್ತಿದೆ ಎಂದು ಹೇಳುವ ಸುದೀಪ್, ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೂ ಕೂಡ ಕ್ರಿಕೆಟ್ ಪ್ರೇಮವನ್ನು ಬಿಟ್ಟಿರಲಿಲ್ಲ.
ಸಿಸಿಎಲ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನಾಗಿ ತಂಡ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.ಸಿಸಿಎಲ್ ಅಲ್ಲದೆ ರಾಜ್‍ಕಪ್, ಚಂದನವನ ಕಪ್‍ನಲ್ಲೂ ತಂಡದ ನಾಯಕತ್ವ ವಹಿಸಿದ್ದ ಸುದೀಪ್ ಲಂಡನ್‍ನ ಲಾಡ್ರ್ಸ್ ಮೈದಾನಲ್ಲಿ ಕ್ರಿಕೆಟ್ ಆಡಿದ ಮೊದಲ ಸ್ಯಾಂಡಲ್‍ವುಡ್ ನಟ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಸಿನಿಲೋಕದೊಂದಿಗೆ ಕ್ರಿಕೆಟ್ ರಂಗದಲ್ಲೂ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಐಪಿಎಲ್ 13ರಲ್ಲಿ ರಾಯಲ್‍ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗುವ ಮೂಲಕ ತಂಡದ ಗೆಲುವಿಗಾಗಿ ಜೋಶ್ ತುಂಬುವಂತಾಗಲಿ.