ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನಡೆಯುತ್ತಿದೆ. ರಾಮಮಂದಿರ ನಿರ್ಮಾಣದ ಸಾರ್ಥಕ ಸಂಭ್ರಮದಲ್ಲಿ ಇಲ್ಲೊಬ್ಬರು ತಮ್ಮ ಕಲ್ಪನೆಯ ರಾಮ ಮಂದಿರ ನಿರ್ಮಾಣ ಮಾಡಿ ವಿಸ್ಮಯ ಸೃಷ್ಟಿಸಿದ್ದಾರೆಗಡಿನಾಡು ಕಾಸರಗೋಡಿನ ಮಂಜೇಶ್ವರದ ಕಡಂಬಾರ್ ಚೆಂಬಪದವು ನಿವಾಸಿ ಮೌನೇಶ್ ಆಚಾರ್ಯ ಉರಿದ ಊದುಬತ್ತಿಯ ಉಳಿದ ತುಂಡು ಕಡ್ಡಿಯಿಂದ ರಾಮ ಮಂದಿರದ ಕಲ್ಪನೆಗೆ ರೂಪ ನೀಡಿದ್ದಾರೆ. ಅಂಗೈಯೊಳಗೆ ಅಡಕವಾಗುವ ಅತೀ ಚಿಕ್ಕ ರಾಮಮಂದಿರ ನೋಡುಗರಿಗೆ ವಿಸ್ಮಯ ಸೃಷ್ಟಿಸುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ ಹಸಿರು ನಿಶಾನೆ ತೋರಿಸಿದ ಅಂದಿನಿಂದ ಇವರ ಈ ಕಲ್ಪನೆಯ ಸೇವೆ ಆರಂಭವಾಗಿತ್ತು.
ಮೌನೇಶ್ ಆಚಾರ್ಯ, ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರ ಸಮೀಪ ಸ್ವರ್ಣೋದ್ಯಮಿಯಾಗಿ ಹರಕೆ ಸೇವೆಗಳ ವಸ್ತು ಪೂರೈಕೆಯ ಉದ್ಯಮ ನಡೆಸುತ್ತಿದ್ದಾರೆ. ಇವರು ಮೂಲತಃ ಕರಕುಶಲ ಕರ್ಮಿ. ಹಲವಾರು ಸಾಹಿತ್ಯಗಳನ್ನು ರಚಿಸುತ್ತಾ ಯುವ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ರಾಮ ಭಕ್ತಿ ಪ್ರೇರಿತರಾಗಿ ತಮ್ಮ ಕರ ಕುಶಲತೆಯಿಂದ ಈ ಚಿಕ್ಕ ರಾಮ ಮಂದಿರ ನಿರ್ಮಾಣಕ್ಕೆ ತೊಡಗಿಕೊಂಡಿದ್ದರು. ರಾಮ ಮಂದಿರದ ಶಿಲಾನ್ಯಾಸದ ಸಂದರ್ಭಕ್ಕೆ ಸರಿಯಾಗಿ ತಮ್ಮ ಕಲ್ಪನೆಯ ಮಂದಿರ ನಿರ್ಮಾಣಕ್ಕೆ ಅಂತಿಮ ಸ್ಪರ್ಶ ನೀಡಿರುವುದು ವಿಶೇಷವಾಗಿದೆ.
ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಉರಿದ ಊದು ಬತ್ತಿ ಕಡ್ಡಿಗಳನ್ನು ಉಪಯೋಗಿಸಿ ಐದು ಇಂಚು ಎತ್ತರದ ಸುಂದರ ಮಂದಿರ ನಿರ್ಮಿಸಿದ್ದಾರೆ. ಗೋಪುರ ನಾಲ್ಕು ಇಂಚು ಎತ್ತರವಿದ್ದು, ಮಂದಿರದ ಮೇಲ್ಗಡೆ ಸಹಿತ ಅತೀ ಚಿತ್ತಾಕರ್ಷಕ ಶೈಲಿಯಲ್ಲಿ ನೋಡುಗರ ಮನ ಸೆಳೆಯುತ್ತದೆ. ದಿನಂಪ್ರತಿ ದೇವರಿಗೆ ಊದು ಬತ್ತಿ ಉರಿಸಿ ಅದರಿಂದ ಸಿಗುವ ಕಡ್ಡಿಯನ್ನು ಸಂಗ್ರಹಿಸಿ, ಅಂಗೈ ಅಗಲದ ಅತ್ಯಂತ ಚಿಕ್ಕ ರಾಮ ಮಂದಿರ ನಿರ್ಮಿಸುವುದೆಂದರೆ ನಿಜವಾಗಿಯೂ ಸೋಜಿಗವಾಗಿದೆ.